ಬೆಂಗಳೂರು | ಟೆಕ್ಕಿ ಆತ್ಮಹತ್ಯೆ ಪ್ರಕರಣ : ತನಿಖೆ ಚುರುಕು
ಅತುಲ್ ಸುಭಾಷ್ (Photo : x)
ಬೆಂಗಳೂರು : ಸಾಫ್ಟ್ವೇರ್ ಇಂಜಿನಿಯರ್ ಅತುಲ್ ಸುಭಾಷ್ (34) ಆತ್ಮಹತ್ಯೆ ಪ್ರಕರಣದ ತನಿಖೆ ಆರಂಭಿಸಿರುವ ಮಾರತ್ಹಳ್ಳಿ ಠಾಣೆ ಪೊಲೀಸರ ತಂಡ ಆರೋಪಿಗಳ ವಿಚಾರಣೆ ನಡೆಸಲು ಉತ್ತರ ಪ್ರದೇಶಕ್ಕೆ ತೆರಳಿದ್ದು, ತನಿಖೆ ಚುರುಕುಗೊಳಿಸಿದೆ.
ಪಿಎಸ್ಸೈ ಜ್ಞಾನದೇವ್ ನೇತೃತ್ವದ ತಂಡ ಉತ್ತರ ಪ್ರದೇಶದ ಜೌನ್ ಪುರ್ಗೆ ತಲುಪಿದ್ದು, ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ, ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎರಡು ದಿನಗಳ ಹಿಂದೆ ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಅನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 108 (ಆತ್ಮಹತ್ಯೆಗೆ ಪ್ರಚೋದನೆ) ಆರೋಪದಡಿ ಮೊಕದ್ದಮೆ ದಾಖಲಾಗಿತ್ತು. ಅದರನ್ವಯ ಉತ್ತರ ಪ್ರದೇಶದತ್ತ ತೆರಳಿರುವ ಪೊಲೀಸರ ತಂಡ, ಮೊದಲು ನೋಟಿಸ್ ಜಾರಿಗೊಳಿಸಿ ಮೃತನ ಪತ್ನಿಯ ವಿಚಾರಣೆ ನಡೆಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.