ಬೆಂಗಳೂರು | ರೈಲ್ವೇ ನಿಲ್ದಾಣದಲ್ಲಿ ಬಾಲಕಿಯ ಮೃತದೇಹ ಪತ್ತೆ
ಸಾಂದರ್ಭಿಕ ಚಿತ್ರ (PC : Meta AI)
ಬೆಂಗಳೂರು : ಬಾಲಕಿಯೊಬ್ಬಳನ್ನು ಹತ್ಯೆಗೈದು ಮೆಜೆಸ್ಟಿಕ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಮೃತದೇಹ ಎಸೆದಿರುವ ಘಟನೆ ಬುಧವಾರ ವರದಿಯಾಗಿದೆ.
ಸುಮಾರು 6 ವರ್ಷದ ಬಾಲಕಿಯ ಮೃತದೇಹವಾಗಿದ್ದು, ವಿವರ ಇನ್ನೂ ಲಭ್ಯವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ರೈಲ್ವೇ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಬೇರೆ ಯಾವುದೋ ಸ್ಥಳದಲ್ಲಿ ಹತ್ಯೆಗೈದು ಮೃತದೇಹವನ್ನು ತಂದು ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಎಫ್ಎಸ್ಎಲ್ ತಂಡ ಹಾಗೂ ಸೀನ್ ಆಫ್ ಕ್ರೈಂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ
ಈ ಬಗ್ಗೆ ರಾಜ್ಯ ರೈಲ್ವೇ ಅಧಿಕಾರಿ ಡಾ.ಸೌಮ್ಯಲತಾ ಎಸ್.ಕೆ. ಪ್ರತಿಕ್ರಿಯಿಸಿದ್ದು, "ಮೃತ ಬಾಲಕಿಯ ಕಡೆಯವರು ಯಾರೂ ಪತ್ತೆಯಾಗಿಲ್ಲ. ಆದರೆ, ಬಾಲಕಿ ಭಿಕ್ಷಾಟನೆಯಲ್ಲಿ ತೊಡಗಿರುತ್ತಿದ್ದುದನ್ನು ಗಮನಿಸಿರುವುದಾಗಿ ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದರ ಕುರಿತು ತಕ್ಷಣಕ್ಕೆ ನಿರ್ಧರಿಸಲು ಸಾಧ್ಯವಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ತಿಳಿಯಲಿದೆ. ಸದ್ಯ ಬೆಂಗಳೂರು ಕೇಂದ್ರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಂಡಿದ್ದೇವೆ" ಎಂದು ತಿಳಿಸಿದರು.