ಬೆಂಗಳೂರು | ಮಾಲಕರ ಮನೆಯಲ್ಲಿ ಕಳ್ಳತನ : ಮೂವರ ಬಂಧನ, 30 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ
ಸಾಂದರ್ಭಿಕ ಚಿತ್ರ
ಬೆಂಗಳೂರು : ಕೆಲಸ ಮಾಡುತ್ತಿದ್ದ ಮಾಲಕರ ಮನೆಯಲ್ಲಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣದಡಿ ಮನೆಗೆಲಸದಾಕೆ ಸೇರಿ ಮೂವರನ್ನು ನಗರದ ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ದಿವ್ಯಾ, ಮಂಜು ಹಾಗೂ ಜೋಮನ್ ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇವರಿಂದ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಮಲೂರಿನ ದಿವ್ಯಶ್ರೀ ಟೆಕ್ ಪಾರ್ಕ್ನ ವಿಲ್ಲಾವೊಂದರಲ್ಲಿ ನೆಲೆಸಿದ್ದ ಉದ್ಯಮಿ ಮನೆಯಲ್ಲಿ ಆರೋಪಿ ದಿವ್ಯಾ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ರಜೆ ಹಿನ್ನೆಲೆಯಲ್ಲಿ ಮಾಲಕರ ಕುಟುಂಬ ಜು.13ರಂದು ಪ್ರವಾಸಕ್ಕೆ ತೆರಳಿತ್ತು. ಜು.27ರಂದು ಪ್ರವಾಸ ಮುಗಿಸಿ ಮನೆಗೆ ಬಂದು ಪರಿಶೀಲಿಸಿದಾಗ ಡೈಮಂಡ್ ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಏಳು ಮಂದಿ ವಿರುದ್ಧ ಅನುಮಾನ ವ್ಯಕ್ತಪಡಿಸಿ, ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮನೆಕೆಲಸದಾರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ದಿವ್ಯಾ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವರ್ಷಗಳಿಂದ ಮಾಲಕರ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ದಿವ್ಯಾ, ಹಂತ-ಹಂತವಾಗಿ ಸುಮಾರು ಆರು ತಿಂಗಳಿಂದ ಚಿನ್ನಾಭರಣ ಎಗರಿಸಿರುವ ಬಗ್ಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. ಅಲ್ಲದೇ, ಪೊಲೀಸರ ವಿಚಾರಣೆ ವೇಳೆ ಕೈ ಕುಯ್ದುಕೊಳ್ಳಲು ಯತ್ನಿಸಿದ್ದಳು ಎನ್ನಲಾಗಿದೆ.
ಈಕೆ ನೀಡಿದ ಮಾಹಿತಿ ಮೇರೆಗೆ 30 ಲಕ್ಷ ರೂ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕಳ್ಳತನ ಮಾಡಿದ ಮಾಲನ್ನು ಮಂಜು ಬಚ್ಚಿಟ್ಟು ಅದನ್ನು ವಿಲೇವಾರಿ ಮಾಡುವ ಕೆಲಸವನ್ನು ಡ್ರೈವರ್ ಆಗಿದ್ದ ಜೋಮನ್ಗೆ ವಹಿಸಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.