ಬೆಂಗಳೂರು | ಕದ್ದ ಮಾಂಗಲ್ಯ ಸರ ದೇವರಿಗೆ ಅರ್ಪಿಸುತ್ತಿದ್ದವನ ಸೆರೆ
ಬೆಂಗಳೂರು : ಪ್ರಮುಖ ಸರಗಳ್ಳತನ ಪ್ರಕರಣವೊಂದನ್ನು ಬಂಧಿಸಿರುವ ಇಲ್ಲಿನ ಗಿರಿನಗರ ಠಾಣಾ ಪೊಲೀಸರು 24 ಲಕ್ಷ ರೂ. ಮೌಲ್ಯದ 310 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಮತ್ತೊಂದೆಡೆ, ಈತ ಕದ್ದ ಮಾಂಗಲ್ಯವನ್ನು ದೇವರಿಗೆ ಕಾಣಿಕೆ ರೂಪದಲ್ಲಿ ಅರ್ಪಣೆ ಮಾಡುತ್ತಿದ್ದ ಸಂಗತಿ ಬಯಲಾಗಿದೆ.
ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ದಯಾನಂದ್, ಹುಬ್ಬಳ್ಳಿಯ ಕೋಳಿವಾಡದ ನಿವಾಸಿ ವಿಶ್ವನಾಥ್(34) ಬಂಧಿತ ಆರೋಪಿ ಆಗಿದ್ದು, ಈತ ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಹೈದರಾಬಾದ್ನ ಜೈಲಿನಲ್ಲಿದ್ದ. ಗಿರಿನಗರ ಪೊಲೀಸರು ಟ್ರಾನ್ಸಿಟ್ ವಾರೆಂಟ್ ಮೇರೆಗೆ ನಗರಕ್ಕೆ ಕರೆತಂದು ವಿಚಾರಣೆ ನಡೆಸಿದಾಗ ಹಲವು ಮಾಹಿತಿ ಬೆಳಕಿಗೆ ಬಂದಿದೆ ಎಂದರು.
ಸರಗಳ್ಳತನ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದ ಆರೋಪಿ, ಆನ್ಲೈನ್ ಮೂಲಕ ಬೈಕ್ ಖರೀದಿಸಿದ್ದು, ಅದನ್ನು ಕೃತ್ಯಕ್ಕೆ ಬಳಸುತ್ತಿದ್ದ. ರಸ್ತೆಯಲ್ಲಿ ಸಾಗುತ್ತಿದ್ದ ಮಹಿಳೆಯರ ಚಿನ್ನಾಭರಣ ಕದಿಯುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಪರಿಚಯಸ್ಥರ ಮೂಲಕ ಮಾರಾಟ ಮಾಡಿ ಬಂದ ಹಣದಿಂದ ಗೋವಾಕ್ಕೆ ತೆರಳಿ ಜೂಜಾಡುತ್ತಿದ್ದ.
ಅಷ್ಟೇ ಮಾತ್ರವಲ್ಲದೆ, ಮದ್ಯಪಾನ ಸೇರಿ ಇನ್ನಿತರ ದುಶ್ಚಟಗಳಿಗೂ ದಾಸನಾಗಿದ್ದ. ಕದ್ದ ಮಾಂಗಲ್ಯ ಸರದಿಂದ ತನಗೆ ಕೆಡುಕಾಗಬಹುದೆಂದು ಭಾವಿಸಿ ದೇವಸ್ಥಾನಕ್ಕೆ ತೆರಳಿ ಮಾಂಗಲ್ಯವನ್ನು ದೇವರಿಗೆ ತಪ್ಪು ಕಾಣಿಕೆ ಅರ್ಪಿಸುತ್ತಿದ್ದ ಎಂದು ಅವರು ಉಲ್ಲೇಖಿಸಿದರು.
ಈತನ ವಿರುದ್ಧ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸುಮಾರು 155ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ಜ್ಞಾನಭಾರತಿ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದಿದ್ದರು. ನಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಅವರು ಹೇಳಿದ್ದಾರೆ.