ಬೆಂಗಳೂರು | ಕುಸಿದ ನಿರ್ಮಾಣ ಹಂತದ ಕಟ್ಟಡ : ಇಬ್ಬರು ಮೃತ್ಯು, ಹಲವರಿಗೆ ಗಂಭೀರ ಗಾಯ
ಹಲವು ಕಾರ್ಮಿಕರು ಸಿಲುಕಿರುವ ಶಂಕೆ, ಮುಂದುವರೆದ ಕಾರ್ಯಾಚರಣೆ
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಕಾರ ಮಳೆ ಸುರಿಯುತ್ತಿರುವ ನಡುವೆ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಸಂಭವಿಸಿದೆ.
ಮಂಗಳವಾರ ಇಲ್ಲಿನ ಕಮ್ಮನಹಳ್ಳಿ ಬಳಿಯ ಬಾಬುಸಾಹೇಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ದಿಢೀರ್ ಆಗಿ ಕುಸಿದಿದ್ದು, ಈ ವೇಳೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಕಟ್ಟಡದ ಒಳಗೆ ಸಿಲುಕಿದ್ದ ಇಬ್ಬರನ್ನು ಹೊರಕ್ಕೆ ತೆಗೆಯಲಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನೂ ಆರೇಳು ಕಾರ್ಮಿಕರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಕಟ್ಟಡದ ವಿವಿಧ ಭಾಗದಲ್ಲಿ ಸಿಲುಕಿದ್ದ 14 ಮಂದಿಯನ್ನು ಇದುವರೆಗೂ ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ, ಹಲವು ಕಾರ್ಮಿಕರು ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ನೆಲಮಹಡಿಯಲ್ಲಿ ಮಹಿಳೆ ಸೇರಿದಂತೆ ಐವರು ಕಾರ್ಮಿಕರು ಸಿಮೆಂಟ್ ಮಿಶ್ರಣದ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ನಾಪತ್ತೆ ಆಗಿದ್ದರು ಎಂದು ತಿಳಿಸಿದರು.
ಘಟನೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಇದೇ ವೇಳೆ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.