ಬೆಂಗಳೂರು | ಹೆದ್ದಾರಿಯಲ್ಲಿ ವೀಲಿಂಗ್ : ಸ್ಕೂಟರ್ಗಳನ್ನು ಫ್ಲೈಓವರ್ ಮೇಲಿಂದ ಕೆಳಗೆಸದ ಸಾರ್ವಜನಿಕರು
PC : x/@gharkekalesh
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡುತ್ತಿದ್ದ ಇಬ್ಬರ ಸ್ಕೂಟರ್ ಗಳನ್ನು ಫ್ಲೈಓವರ್ ಮೇಲಿಂದ ಸಾರ್ವಜನಿಕರು ಎತ್ತಿ ಸರ್ವಿಸ್ ರಸ್ತೆಗೆ ಬಿಸಾಡಿರುವ ಘಟನೆ ತುಮಕೂರು ರಸ್ತೆಯ ಅಡಕಮಾರನಹಳ್ಳಿ ಬಳಿ ನಡೆದಿದೆ.
ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಒಂದು ವಾಹನಕ್ಕೆ ಢಿಕ್ಕಿ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಸ್ಕೂಟರ್ಗಳನ್ನು ಫ್ಲೈಓವರ್ ಮೇಲಿಂದ ಕೆಳಕ್ಕೆ ಹಾಕುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾರ್ವಜನಿಕರ ಈ ಕ್ರಮವನ್ನು ಶ್ಲಾಘಿಸಿರುವ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು, ಇಂತಹ ಅಪಾಯಕಾರಿ ಸ್ಟಂಟ್ ಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ.
ಘಟನೆ ಆಗಸ್ಟ್ 15 ರಂದು ನಡೆದಿದ್ದು, ವರದಿಗಳ ಪ್ರಕಾರ, ಘಟನೆಯಲ್ಲಿ ಭಾಗಿಯಾಗಿರುವ ಯುವಕರು ಉತ್ತರ ಬೆಂಗಳೂರಿನ ಮತ್ತಿಕೆರೆ ಮತ್ತು ಯಶವಂತಪುರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನೆಲಮಂಗಲ ಪೊಲೀಸರು ಸ್ಕೂಟರ್ ಗಳನ್ನು ವಶಪಡಿಸಿಕೊಂಡು ಸ್ಟಂಟ್ ಮಾಡಿದ ಯುವಕರ ವಿರುದ್ಧ ಪ್ರಕರಣ ದಾಖಲಿಸಿಲಾಗಿದೆ ಎಂದು ತಿಳಿದು ಬಂದಿದೆ.