ಬೆಂಗಳೂರು| ಆಟವಾಡುತ್ತಿದ್ದ ವೇಳೆ ಆಯತಪ್ಪಿ ಈಜುಕೊಳದಲ್ಲಿ ಬಿದ್ದು ಬಾಲಕಿ ಮೃತ್ಯು
ಸಾಂದರ್ಭಿಕ ಚಿತ್ರ
ಬೆಂಗಳೂರು: ಆಟವಾಡುತ್ತಿದ್ದ ವೇಳೆ ಆಯತಪ್ಪಿ ಈಜುಕೊಳದಲ್ಲಿ ಬಿದ್ದು ಬಾಲಕಿ ಮೃತಪಟ್ಟ ಘಟನೆ ಇಲ್ಲಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಡಿ.28ರ ಗುರುವಾರ ಸಂಜೆ ವೇಳೆಗೆ ಅಪಾರ್ಟ್ ಮೆಂಟ್ ನ ಸ್ವಿಮ್ಮಿಂಗ್ ಪೂಲ್ ಬಳಿ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ಆಯತಪ್ಪಿ ಸ್ವಿಮ್ಮಿಂಗ್ ಪೂಲ್ಗೆ ಬಿದ್ದಿದ್ದಾಳೆ. ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಆಕೆಯನ್ನು ಕೆಲವರು ಗಮನಿಸಿ, ಕೂಡಲೇ ಸಹಾಯಕ್ಕೆ ದೌಡಾಯಿಸಿದ್ದಾರೆ. ಬಳಿಕ ಈಜುಕೊಳದಿಂದ ಮೇಲಕ್ಕೆತ್ತಿ ಹೊರತಂದಿದ್ದಾರೆ.
ಆದರೆ, ಬಾಲಕಿ ನೀರಿನಲ್ಲಿ ಬಿದ್ದಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದಳು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಘಟನೆ ಕುರಿತು ಮೃತಳ ತಂದೆ ರಾಜೇಶ್ ದೂರು ನೀಡಿದ್ದಾರೆ. ಸದ್ಯ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಬಾಲಕಿ ಸಾವಿಗೂ ಮುನ್ನ ಸಿಮ್ಮಿಂಗ್ ಪೂಲ್ ಬಳಿ ಹೋಗುವ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.