ಬೆಂಗಳೂರು| ಯುವತಿ ಕೊಲೆ ಪ್ರಕರಣ: ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ
ಆನ್ಲೈನ್ನಲ್ಲಿ ನೈಲಾನ್ ಹಗ್ಗ ಆರ್ಡರ್; ತನಿಖೆಯಲ್ಲಿ ಸ್ಫೋಟಕ ಅಂಶ ಬೆಳಕಿಗೆ
Photo:X/@HateDetector
ಬೆಂಗಳೂರು: ಅಸ್ಸಾಂ ಮೂಲದ ಯುವತಿ ಹತ್ಯೆ ಪ್ರಕರಣ ಸಂಬಂಧ ಆರೋಪಿ ಆರವ್ ಹನೋಯ್ನನ್ನು ಇಲ್ಲಿನ ಇಂದಿರಾನಗರ ಠಾಣಾ ಪೊಲೀಸರು ಬಂಧಿಸಿದ್ದು, ಕೃತ್ಯದ ಬಳಿಕ ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿ ವಿಫಲವಾಗಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ.
ಮಾಯಾ (19) ಎಂಬಾಕೆಯನ್ನು ಹತ್ಯೆಗೈದ ಬಳಿಕ ಆನ್ಲೈನ್ನಲ್ಲಿ ನೈಲಾನ್ ಹಗ್ಗ ತರಿಸಿಕೊಂಡಿದ್ದ ಆರೋಪಿ 2 ದಿನವೂ ಆತ್ಮಹತ್ಯೆಗೆ ಯತ್ನಿಸಿದ್ದ. ಆನಂತರ, ಮೃತದೇಹದ ಜೊತೆಗೆ ಕಳೆದಿದ್ದ ಆರೋಪಿ, ನ.26 ರಂದು ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ.
ಯಾವ ಕಡೆ ಹೋಗಬೇಕು ಎಂಬ ಯೋಚನೆಯಲ್ಲಿರುವಾಗ ತನ್ನ ಮುಂದಿದ್ದ ಪ್ರಯಾಣಿಕನೊಬ್ಬ ವಾರಣಾಸಿಗೆ ಹೋಗಲು ಟಿಕೆಟ್ ವಿಚಾರಿಸುತ್ತಿದ್ದುದನ್ನು ನೋಡಿ ತಾನೂ ವಾರಣಾಸಿಗೆ ಟಿಕೆಟ್ ಪಡೆದು ರೈಲು ಹತ್ತಿದ್ದ ಎನ್ನಲಾಗಿದೆ.
ವಾರಣಾಸಿಗೆ ಹೋದ ಬಳಿಕ ಮೊಬೈಲ್ ಆನ್ ಮಾಡಿದ್ದ ಆರೋಪಿ ತನ್ನ ಅಜ್ಜನಿಗೆ ಕರೆ ಮಾಡಿ ಯುವತಿಯನ್ನು ಹತ್ಯೆಗೈದ ವಿಚಾರ ತಿಳಿಸಿದ್ದ. ಮತ್ತೊಂದೆಡೆ ಅಷ್ಟರಲ್ಲಾಗಲೇ ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯ ಮನೆಗೆ ತಲುಪಿ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.