ಬೆಂಗಳೂರು | ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್‍ಗೆ 70 ಸಾವಿರ ಲೀಡ್ ಕೊಡಿಸಲು ಝಮೀರ್ ಅಹ್ಮದ್ ಮನವಿ
ಬೆಂಗಳೂರು: ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದು. ದೇಶದಲ್ಲಿ ನೆಮ್ಮದಿ, ಬಡವರ ಕಲ್ಯಾಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ವಿದ್ಯಾವಂತರಾಗಿದ್ದು ಅವರಿಗೆ ನಮ್ಮ ಕ್ಷೇತ್ರದಲ್ಲಿ 70 ಸಾವಿರ ಲೀಡ್ ಕೊಡಬೇಕು ಎಂದು ಕಾರ್ಯಕರ್ತರಿಗೆ ಸಚಿವ ಝಮೀರ್ ಅಹ್ಮದ್ ಖಾನ್ ಮನವಿ ಮಾಡಿದರು.
ಸೋಮವಾರ ಚಾಮರಾಜಪೇಟೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ನನ್ನ ಶಕ್ತಿಯೆ ಕಾರ್ಯಕರ್ತರು. ಅವರ ಋಣ ನಾನು ಎಷ್ಟು ಜನ್ಮ ಎತ್ತಿದರೂ ತೀರಿಸಲಾಗದು. ನನಗೆ ಕಾಂಗ್ರೆಸ್ ಪಕ್ಷ ಅತಿ ದೊಡ್ಡ ಗೌರವ ಕೊಟ್ಟಿದೆ. ಇದೆಲ್ಲವೂ ನಿಮ್ಮಿಂದ ಎಂದ ಅವರು, ಬಿಜೆಪಿ ಅಭಿವೃದ್ಧಿ ಕುರಿತು ಮಾತನಾಡುವುದಿಲ್ಲ. ಕೇವಲ ಹಿಂದೂ-ಮುಸ್ಲಿಂ ಎಂದುಕೊಂಡು ಮತ ಪಡೆಯಲು ಹವಣಿಸುತ್ತದೆ ಎಂದು ಆರೋಪಿಸಿದರು.
ಜಾತಿ-ಧರ್ಮದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡುವುದು ಬಿಜೆಪಿ ಚಾಳಿ. ಆದರೆ ಕಾಂಗ್ರೆಸ್ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟು ಎಲ್ಲ ವರ್ಗದ ಅಭಿವೃದ್ಧಿ ಬಯಸುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಜನಪರ ಯೋಜನೆ ಅನುಷ್ಠಾನಗೊಳಿಸಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಜಾರಿ ಮಾಡಿ ಆರನೇ ಗ್ಯಾರಂಟಿ ಯಾಗಿ 1.82 ಲಕ್ಷ ಬಡ ಕುಟುಂಬಗಳಿಗೆ ಮನೆ ಕೊಡುವ ತೀರ್ಮಾನ ಮಾಡಿ, ಏಕ ಕಾಲದಲ್ಲಿ 36 ಸಾವಿರ ಮನೆ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ಪ್ರತಿ ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ ಒಂದು ಲಕ್ಷ ರೂ., ಪ್ರತಿ ಬಡ ಕುಟುಂಬದ ಮಹಿಳೆಗೆ ಒಂದು ಲಕ್ಷ ರೂ. ನೀಡುವ ಘೋಷಣೆ ಮಾಡಿದ್ದೇವೆ. ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗುವುದು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಅಧಿಕಾರಕ್ಕೆ ಬಂದು ದೇಶದಲ್ಲಿ ಐದು ಗ್ಯಾರಂಟಿ ಅನುಷ್ಠಾನ ಮಾಡುತ್ತೇವೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಕಾರ್ಯಕರ್ತರ ಸಮಾವೇಶದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕ ರಿಝ್ವಾನ್ ಅರ್ಶದ್, ಮುಖಂಡರಾದ ಸಿ.ಎಂ.ಫೈಝ್, ಅಲ್ತಾಫ್ ಖಾನ್, ರಮೇಶ್, ವಿನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜೆಡಿಸ್ ಹಿರಿಯ ನಾಯಕ ಶಫಿಉಲ್ಲಾ, ಆನಂದ್, ಕುಮಾರ್ ಸೇರಿದಂತೆ ಹಲವು ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.