ಧರ್ಮದ ಹೆಸರಿನಲ್ಲಿ ಕೀಳಾಗಿ ಕಾಣವುದು ತೊಲಗಲಿ: ಬಾನು ಮುಷ್ತಾಕ್
‘ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವದ ಚಿಂತನೆಗಳು’ ಕುರಿತು ಸಂವಾದ ಕಾರ್ಯಕ್ರಮ

ಬಾನು ಮುಷ್ತಾಕ್
ಬೆಂಗಳೂರು : ಇಂದಿನ ಕಾಲಘಟ್ಟದಲ್ಲಿ ಧರ್ಮಗಳ ಹೆಸರಿನಲ್ಲಿ ಮನುಷ್ಯ, ಮನುಷ್ಯರು ಪರಸ್ಪರ ಕೀಳಾಗಿ ಕಾಣುವ ಕೆಟ್ಟ ಕಲ್ಪನೆ ತೊಲಗಬೇಕು ಎಂದು ಹಿರಿಯ ಸಾಹಿತಿ ಬಾನು ಮುಷ್ತಾಕ್ ಆಶಿಸಿದರು.
ರವಿವಾರ ವಿಧಾನಸೌಧದ ಪುಸ್ತಕ ಮೇಳದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವದ ಚಿಂತನೆಗಳು’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೀತಿಯ ನಂಟು ಬೆಳೆಯಬೇಕು. ಆದರೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮನುಷ್ಯ ಮನುಷ್ಯರು ಪರಸ್ಪರ ಅನುಮಾನದಿಂದ ನೋಡುವುದು, ಕೀಳಾಗಿ ಭಾವಿಸುವುದು ಕಳೆಯಬೇಕು ಎಂದರು.
ನನ್ನ ‘ಹಾರ್ಟ್ ಲ್ಯಾಂಪ್’ ಕೃತಿಯನ್ನು ಅಭಿರುಚಿ ಪ್ರಕಾಶನ ಪ್ರಕಟಿಸಿದೆ. ಪ್ರಕಾಶಕರು ‘ಬೂಕರ್’ ಪ್ರಶಸ್ತಿಗೆ ಕಳುಹಿಸಿದ್ದಾರೆ ಎನ್ನುವ ಮಾಹಿತಿಯೇ ಇರಲಿಲ್ಲ. ಲಾಂಗ್ ಲಿಸ್ಟ್ ಘೋಷಣೆ ಆದಾಗಲೇ ನನ್ನ ಅರಿವಿಗೆ ಬಂದಿದ್ದು. ಈ ಪಟ್ಟಿಯಲ್ಲಿರುವ 13 ಕೃತಿಗಳಲ್ಲಿ ಆರು ಕೃತಿಗಳು ‘ಶಾರ್ಟ್ ಲಿಸ್ಟ್’ ಆಗಿ ಅವುಗಳಲ್ಲಿ ಒಂದು ಕೃತಿ ಬಹುಮಾನಕ್ಕೆ ಆಯ್ಕೆಯಾಗಿ ಎಪ್ರಿಲ್ 8ರಂದು ಅದು ಘೋಷಣೆಯಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಬೂಕರ್ ಪ್ರಶಸ್ತಿ ಆರಂಭವಾದಲ್ಲಿಂದ ಇಲ್ಲಿವರೆಗೆ ಕನ್ನಡದ ಕೃತಿಗಳು ಆಯ್ಕೆಯ ಪಟ್ಟಿಗೇ ಹೋಗಿರಲಿಲ್ಲ. ಇದೇ ಮೊದಲ ಬಾರಿಗೆ ನನ್ನ ಕಥೆಗಳನ್ನು ಇಂಗ್ಲಿಷ್ಗೆ ಅನುವಾದಿಸಿದ ‘ಹಾರ್ಟ್ ಲ್ಯಾಂಪ್’ ಕೃತಿ ಬೂಕರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಪಟ್ಟಿಯಲ್ಲಿದೆ ಎಂದು ಗೊತ್ತಾದಾಗ ಎಲ್ಲರೂ ಇದು ನಮಗೆ ಸಂದ ಗೌರವ ಎಂದು ಹೇಳಿಕೊಂಡರಲ್ಲ. ಅದುವೇ ಕನ್ನಡದ ಪ್ರೀತಿ. ಒಳಗೊಳ್ಳುವಿಕೆಯೇ ನಿಜವಾದ ಸಾಹಿತ್ಯ ಎಂದು ಬಾನು ನುಡಿದರು.
ಜೀವನದ ನಿರಂತರ ಪಯಣದಲ್ಲಿ ಏಳುಬೀಳು, ಸವಾಲುಗಳು, ಕಠಿಣ ಪರೀಕ್ಷೆಗಳು ಇದ್ದೇ ಇವೆ. ಇವೆಲ್ಲ ಪಯಣದ ಹೆಜ್ಜೆ ಗುರುತುಗಳು ಮತ್ತು ಅಗ್ನಿ ಪರೀಕ್ಷೆಗಳು. ಹಾಗೆ, ಆಯಾ ಕಾಲಘಟ್ಟದ ಸವಾಲುಗಳು, ಮಹಿಳೆಯರ ಮೇಲೆ ಬೀರಬಹುದಾದ ಪರಿಣಾಮ, ಸಮಾಜದ ಶೋಷಕ ನಿಲುವು, ಪುರುಷ ಪ್ರಾಧಾನ್ಯತೆಯ ಆಕ್ರಮಣ, ಅದನ್ನು ಮೀರುವ ಹೆಣ್ಣು ಮಕ್ಕಳ ಪ್ರಯತ್ನ ಎಲ್ಲವೂ ಭಿನ್ನವಾಗಿ ಸೇರಿಕೊಂಡಿವೆ ಎಂದು ಅವರು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಮಹೇಶ ಜೋಶಿ, ಬರಹಗಾರ ಡಿ. ಡೊಮಿನಿಕ್ ಸೇರಿದಂತೆ ಪ್ರಮುಖರಿದ್ದರು.