ರಾಜಕೀಯ, ಸಾಂಸ್ಕೃತಿಕ ನೈತಿಕತೆ ಹಾಳಾಗುತ್ತಿದೆ : ಪ್ರೊ.ಬರಗೂರು ರಾಮಚಂದ್ರಪ್ಪ
ಡಾ.ರಾಜ್‍ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು : ಇವತ್ತಿನ ಸಂದರ್ಭದಲ್ಲಿ ರಾಜಕೀಯ ನೈತಿಕತೆ ಹಾಳಾಗುತ್ತಿದೆ. ಸಾಂಸ್ಕೃತಿಕ ನೈತಿಕತೆಯಲ್ಲಿಯೂ ಅನೇಕ ಶಿಥಿಲತೆಯನ್ನು ಕಾಣುತ್ತಿದ್ದೇವೆ ಎಂದು ಹಿರಿಯ ಸಾಹಿತಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಡಾ.ರಾಜ್‍ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ನೈತಿಕತೆಯೂ ಅಧಃಪಥನದ ಹಾದಿಯನ್ನಿಡಿದಿರುವಾಗ ನಡೆ ಮತ್ತು ನುಡಿಯಲ್ಲಿ ನೈತಿಕತೆಯನ್ನು ತೋರಿಸಿರುವ ಅಪರೂಪದ ವ್ಯಕ್ತಿಯಾಗಿ ಡಾ.ರಾಜ್‍ಕುಮಾರ್ ಕಾಣುತ್ತಾರೆ ಎಂದು ತಿಳಿಸಿದರು.
ಕಲಾವಿದರು ನೋಡುಗರಿಗೆ, ಆನಂದ, ಸದಾಭಿರುಚಿಯನ್ನು ಬೆಳೆಸಬೇಕು. ಕೆಲವು ಮೌಲ್ಯಗಳನ್ನು ಹುಟ್ಟು ಹಾಕಬೇಕು. ಲೇಖಕರೂ ಅದೇ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಡಾ.ರಾಜ್‍ಕುಮಾರ್ ಅವರನ್ನು ಸ್ಟುಡಿಯೋ ಯಾಕೆ ಕಟ್ಟಲಿಲ್ಲ ಎಂದು ಕೇಳಬಾರದು ಯಾಕೆಂದರೆ, ಅವರ ಕೆಲಸ ಅದಲ್ಲ. ಆದರೆ ಕನ್ನಡ ಚಿತ್ರರಂಗದ ಬೆಳವಣಿಗೆಗೆ ರಾಜ್‍ಕುಮಾರ್ ಕೊಟ್ಟಿರುವ ಕೊಡುಗೆಯನ್ನು ಯಾರೂ ಮೀರಿಸಲು ಆಗುವುದಿಲ್ಲ. ರಾಜ್‍ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟ ನಂತರ, ನೂರಾರು ಚಲನಚಿತ್ರಗಳು ತೆರೆಗೆ ಬಂದವು. ಕನ್ನಡದ ಜನರು ಒಬ್ಬ ನಾಯಕನ್ನು ಹುಡುಕುತಿದ್ದರು. ಆಗ ಡಾ.ರಾಜ್‍ಕುಮಾರ್ ಬಂದರು. ಆಗ ಚಿತ್ರಮಂದಿರಕ್ಕೆ ಜನರು ಬರಲು ಪ್ರಾರಂಭಿಸಿದರು ಎಂದು ಹೇಳಿದರು.
ಡಾ.ರಾಜ್‍ಕುಮಾರ್ ಅವರು ಜೀವನದಲ್ಲಿ ಕನ್ನಡ ಚಿತ್ರ ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ತೀರ್ಮಾನ ಮಾಡಿದಾಗ, ಖ್ಯಾತ ಕಾದಂಬರಿಕಾರ ಅನಕೃ ಅವರು ಡಾ.ರಾಜ್‍ಕುಮಾರ್ ಅವರು ಕನ್ನಡ ಚಲನಚಿತ್ರದಲ್ಲಿ ಮಾತ್ರವೇ ಅಭಿನಯಿಸುವ ತೀರ್ಮಾನ ಮಾಡದಿದ್ದರೆ, ಕನ್ನಡ ಚಿತ್ರರಂಗಕ್ಕೆ ಪ್ರತ್ಯೇಕ ಅಸ್ತಿತ್ವವೇ ಇರುತ್ತಿರಲಿಲ್ಲ ಎಂದು ಹೇಳಿದ್ದರು ಎಂದು ನೆನಪು ಮಾಡಿಕೊಂಡರು.
ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್ ಮಾತನಾಡಿ, ಕನ್ನಡದಲ್ಲಿ ಸಾಹಿತಿಗಳು ಚಲನಚಿತ್ರವನ್ನು ಆತ್ಮೀಯವಾಗಿ ತೆಗೆದುಕೊಂಡಿರುವುದು ಬಹಳ ಕಡಿಮೆ. ಆದರೆ ಬರಗೂರು ರಾಮಚಂದ್ರಪ್ಪ ಅವರು ಅರ್ಥಪೂರ್ಣವಾದ ಚಲನಚಿತ್ರ ಮತ್ತು ಸಾಹಿತ್ಯದ ನಡುವೆ ಒಂದು ಸೇತುವೆ ಕಟ್ಟಿ, ಜನಪರವಾದ ಕೆಲಸ ಮಾಡುವುದು ಹೇಗೆ ಎನ್ನುವುದನ್ನು ಚಿಂತಿಸಿದವರು ಎಂದು ತಿಳಿಸಿದರು.
ಇದೇ ವೇಳೆ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರಿಗೆ ವರನಟ ಡಾ.ರಾಜ್‍ಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಗೌರವ ಸಲಹೆಗಾರ ಪಿ.ಮಲ್ಲಿಕಾರ್ಜುನಪ್ಪ, ಕೆ. ಮೋಹನ್ ರಾವ್ ಮತ್ತಿತರರು ಉಪಸ್ಥಿತರಿದ್ದರು.