ಬಿಬಿಎಂಪಿ (ಆಸ್ತಿ ನಿರ್ವಹಣೆ) ನಿಯಮ-2024 ಜಾರಿ | ‘ಆಸ್ತಿ ವಿಭಾಗದ ಮೇಲೆ ಮುಖ್ಯ ಆಯುಕ್ತರ ಮೇಲ್ವಿಚಾರಣೆ’

ಬೆಂಗಳೂರು: ಬಿಬಿಎಂಪಿ ಆಸ್ತಿಗಳ ನಿರ್ವಹಣೆಯ ಕುರಿತು ತಿದ್ದಪಡಿ ಮಾಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಆಸ್ತಿ ನಿರ್ವಹಣೆ) ನಿಯಮ-2024ದ ಅಂತಿಮ ಪ್ರತಿಯನ್ನು ಮಂಗಳವಾರದಂದು ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸರಕಾರ ಅಧಿಸೂಚನೆ ಹೊರಡಿಸಿದೆ.
ಅಧಿನಿಯಮದ ನಿಯಮಗಳ ಅನ್ವಯ ಬಿಬಿಎಂಪಿ ಆಸ್ತಿ ವಿಭಾಗವು ಕಾನೂನುಗಳಿಗೆ ಒಳಪಟ್ಟು ಬಿಬಿಎಂಪಿ ಮುಖ್ಯ ಆಯುಕ್ತರ ಸಮಗ್ರ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಡಿಯಲ್ಲಿ ಜವಾಬ್ದಾರಿಯಾಗಿರುತ್ತದೆ. ವಲಯ ಆಯುಕ್ತರು, ವಲಯ ಮಟ್ಟದಲ್ಲಿ ಈ ನಿಯಮಗಳ ಅನುಷ್ಠಾನಕ್ಕಾಗಿ ಹಾಗೂ ಪಾಲನೆಗಾಗಿ ಜವಾಬ್ದಾರರಾಗಿರುತ್ತಾರೆ. ಪಾಲಿಕೆಯ ಆಸ್ತಿಗಳ ಪೈಕಿ, ಭೂಮಿ/ಕಟ್ಟಡ ಸಾರ್ವಜನಿಕ ಬಳಕೆಗಾಗಿ ಅವಶ್ಯಕತೆ ಇಲ್ಲವೆಂದು ಅಥವಾ ಮುಂದೆ ಅಂತಹ ಬಳಕೆಗೆ ಉದ್ದೇಶಿಸದಿದ್ದಲ್ಲಿ, ಅಂತಹ ಸ್ವತ್ತುಗಳನ್ನು ಪಾಲಿಕೆಯು ಕ್ರಯ ಅಥವಾ ಗುತ್ತಿಗೆಗೆ ನೀಡಬಹುದಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ವಿನಾಯಿತಿಗಳಿಗೆ ಒಳಪಟ್ಟು, ಪ್ರತಿಯೊಂದು ಕ್ರಯ ಅಥವಾ ಗುತ್ತಿಗೆಯನ್ನು ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ಮುಖಾಂತರ ಸಾರ್ವಜನಿಕ ಹರಾಜು/ಟೆಂಡರ್‌ಗಳ ಮೂಲಕ ಮಾಡಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
ಬಿಬಿಎಂಪಿ ಅಧೀನದ ಎಲ್ಲ ಸ್ಥಿರಾಸ್ತಿಗಳ ಪಟ್ಟಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತರು, ಪಾಲಿಕೆಯ ಆಸ್ತಿ ವಿಭಾಗದ ಮುಖೇನ ನಿರ್ವಹಣೆ ಮಾಡಬೇಕು. ಆಯಾ ವಲಯ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳ ಪಟ್ಟಿಯನ್ನು ಸಂಬಂಧಪಟ್ಟ ವಲಯ ಆಯುಕ್ತರು ನಿರ್ವಹಿಸಬೇಕು ಮತ್ತು ಅದನ್ನು ಅಪ್‍ಡೇಟ್ ಮಾಡಿ ಅನುಮೋದನೆಗಾಗಿ ಮುಖ್ಯ ಆಯುಕ್ತರಿಗೆ ಕಳುಹಿಸಬೇಕು. ಕೂಡಲೇ ಸ್ಥಿರಾಸ್ತಿಗಳ ಪಟ್ಟಿಯನ್ನು ಪಾಲಿಕೆಯ ವೆಬ್‍ಸೈಟ್ ನಲ್ಲಿ ಹಾಗೂ ಸಾರ್ವಜನಿಕವಾಗಿ ಡೊಮೈನ್‍ನಲ್ಲಿ ಪ್ರಕಟಿಸಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಸ್ಥಿರಾಸ್ತಿ ಮಾರಾಟ, ಗುತ್ತಿಗೆ: ಸ್ಥಿರಾಸ್ತಿಗಳ ಮಾರಾಟಕ್ಕೆ ಸಂಬಂಧಿಸಿ ಪಾಲಿಕೆಯ ಸ್ಥಿರಾಸ್ತಿಗಳ ಮಾರಾಟವನ್ನು ರಾಜ್ಯ, ಕೇಂದ್ರ ಸರಕಾರದ ಇಲಾಖೆಗಳಿಗೆ, ಸಾರ್ವಜನಿಕ ವಲಯ ಉದ್ಯಮಗಳು ಅಥವಾ ನಿಕಾಯಗಳಿಗೆ ಮಾತ್ರ ಸರಕಾರದ ಪೂರ್ವಾನುಮತಿ ಪಡೆದು ಮಾರಾಟ ಮಾಡತಕ್ಕದ್ದು, ಇನ್ನಿತರೆ ಯಾರಿಗೂ ಮಾರಾಟ ಮಾಡುವಂತಿಲ್ಲ.
ಮಾರಾಟವು ಕರ್ನಾಟಕ ಮುದ್ರಾಂಕ ಅಧಿನಿಯಮ, 1957(1957ರ ಕರ್ನಾಟಕ ಅಧಿನಿಯಮ 34) ರ ಪ್ರಕರಣ 45ಬಿ ಅಡಿಯಲ್ಲಿ, ಕಾಲಕಾಲಕ್ಕೆ, ಕಂದಾಯ ಇಲಾಖೆಯಿಂದ ಹೊರಡಿಸಿದ ಅಧಿಸೂಚನೆಯ ಪ್ರಕಾರ ಸ್ವತ್ತಿನ ಮಾರ್ಗಸೂಚಿ ದರಕ್ಕೆ ಅನುಸಾರವಾಗಿರಬೇಕು. ರಾಜ್ಯ ಸರಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ಭಾಗಶಃವಾಗಿಅಥವಾ ಪೂರ್ಣವಾಗಿ ಆಸ್ತಿ ಮೇಲೆ ರಿಯಾಯಿತಿಯನ್ನು ನೀಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ಸಂಬಂಧಪಟ್ಟ ಸ್ಥಾಯಿ ಸಮಿತಿಯ ಪೂರ್ವ ಮಂಜೂರಾತಿ ಪಡೆದು 5 ವರ್ಷಗಳಿಗೆ ಮೀರದ ಅವಧಿಗಾಗಿ ಪಾಲಿಕೆಯ ಸ್ಥಿರಾಸ್ತಿಗಳನ್ನು ಗುತ್ತಿಗೆಗೆ ನೀಡಬಹುದು. ಸ್ಥಾಯಿ ಸಮಿತಿಯು ಪಾಲಿಕೆಯ ಒಂದು ವರ್ಗ ಅಥವಾ ಗುಂಪು ಅಥವಾ ಎಲ್ಲ ಸ್ವತ್ತುಗಳಿಗೆ ಮಂಜೂರಾತಿಯನ್ನು ನೀಡಬಹುದು. ಬಿಬಿಎಂಪಿ ಮುಖ್ಯ ಆಯುಕ್ತರು ಪರಿಷತ್ತಿನ ಪೂರ್ವ ಮಂಜೂರಾತಿ ಪಡೆದು, ಐದು ವರ್ಷಗಳಿಗಿಂತ ಹೆಚ್ಚಿನ, ಹದಿನೈದು ವರ್ಷಗಳನ್ನು ಮೀರದ ಅವಧಿಗಾಗಿ ಪಾಲಿಕೆಯ ಸ್ಥಿರಾಸ್ತಿಗಳನ್ನು ಗುತ್ತಿಗೆಗೆ ನೀಡಬಹುದು. ಪರಿಷತ್ತು ಪಾಲಿಕೆಯ ಒಂದು ವರ್ಗ ಅಥವಾ ಗುಂಪು ಅಥವಾ ಎಲ್ಲ ಆಸ್ತಿಗಳಿಗೆ ಸಂಬಂಧಿಸಿದಂತೆ ಮಂಜೂರಾತಿಯನ್ನು ನೀಡಬಹುದು ಎಂದು ಅಧಿಸೂಚನೆ ತಿಳಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ಸರಕಾರದ ಪೂರ್ವಾನುಮೋದನೆಯೊಂದಿಗೆ ಮಾತ್ರ ಹದಿನೈದು ವರ್ಷಗಳಿಗಿಂತ ಹೆಚ್ಚು ಆದರೆ ಮೂವತ್ತು ವರ್ಷಗಳನ್ನು ಮೀರದ ಅವಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಥಿರಾಸ್ತಿಗಳನ್ನು ಗುತ್ತಿಗೆ ನೀಡಬಹುದು. ಸ್ಥಿರಾಸ್ತಿಗಳ ಗುತ್ತಿಗೆಯನ್ನು ಮೂವತ್ತು ವರ್ಷಗಳಿಗೆ ಮೀರಿದ ಅವಧಿಗೆ ನೀಡಬಾರದು ಎಂದು ಸ್ಪಷ್ಟಪಡಿಸಿದೆ.
ನಿರ್ಮಾಣ, ನವೀಕರಣ, ನಿರ್ವಹಣೆ, ಕಾರ್ಯನಿರ್ವಹಣೆ ಮತ್ತು ವರ್ಗಾವಣೆ ಮುಂತಾದವುಗಳಿಗೆ ನೀಡಲಾದ ರಿಯಾಯಿತಿಯನ್ನು ಒಳಗೊಂಡಂತೆ, ಈ ಹಿಂದೆ ಯಾವುದೇ ವಿಧಾನದ ಅಡಿಯಲ್ಲಿ ಒಂದು ಬಾರಿ ನೀಡಲಾಗಿದ್ದ ಗುತ್ತಿಗೆಯನ್ನು ತೊಂಬತ್ತೊಂಭತ್ತು ವರ್ಷಗಳ ಗರಿಷ್ಠ ಮಿತಿಗೆ ಒಳಪಟ್ಟು, ಗರಿಷ್ಠ ಇನ್ನೊಂದು ಅವಧಿಗಾಗಿ ವಿಸ್ತರಣೆಯನ್ನು ನೀಡಬಹುದಾಗಿದೆ.
ವಿಸ್ತರಣೆಯನ್ನು ಅನುಮೋದಿಸುವ ಪ್ರಾಧಿಕಾರವು ಈ ನಿಯಮಗಳಂತೆ ಅದೇ ನಿಬಂಧನೆ ಅಥವಾ ಅವಧಿಗೆ ಸಂಬಂಧಿಸಿದಂತೆ ಹೊಸ ಗುತ್ತಿಗೆ ನೀಡುವುದಕ್ಕಾಗಿ ನಿರ್ದಿಷ್ಟಪಡಿಸಿದಂಥ ರೀತಿಯಲ್ಲಿಯೇ ವಿಸ್ತರಣೆ ನೀಡಬೇಕು. ಈಗಾಗಲೇ ಯಾವ ಸ್ವತ್ತುಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದೆಯೋ ಆ ಸ್ವತ್ತುಗಳ ಗುತ್ತಿಗೆ ನೀಡುವ ಸಂದರ್ಭದಲ್ಲಿ ಗುತ್ತಿಗೆದಾರನು ಯಾವುದೇ ವಿಸ್ತರಣೆಯಿಲ್ಲದೆ ಆ ಸ್ವತ್ತಿನ ಸ್ವಾಧೀನದಲ್ಲಿ ಮುಂದುವರೆದಿದ್ದರೆ, ಹಿಂದಿನ ಗುತ್ತಿಗೆ ಅಥವಾ ವಿಸ್ತರಣಾ ಗುತ್ತಿಗೆಯ ನಿಬಂಧನೆ ಅಥವಾ ಅವಧಿಯನ್ನು ಮೀರದಂತೆ ಅದೇ ಅವಧಿವರೆಗೆ ವಿಸ್ತರಣೆ ನೀಡಬಹುದು. ಈ ನಿಯಮಗಳ ಅಧಿಸೂಚನೆಯ ದಿನಾಂಕದವರೆಗೆ ಮುಕ್ತಾಯವಾದ ಗುತ್ತಿಗೆಗೆ ಸಂಬಂಧಿಸಿದಂತೆ ಅದೇ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಅನಧಿಕೃತ ಭೋಗದ ಅವಧಿಯನ್ನು ಕ್ರಮಬದ್ಧಗೊಳಿಸಬಹುದು ಎಂದು ತಿಳಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ಣ ಮತ್ತು ಇಂದಿನವರೆಗಿನ ಎಲ್ಲ ಬಾಕಿಗಳನ್ನು ಗುತ್ತಿಗೆದಾರರು ಸಂದಾಯ ಮಾಡಿದ ಹೊರತು ಯಾವುದೇ ವಿಸ್ತರಣೆಯನ್ನು ನೀಡುವಂತಿಲ್ಲ ಎಂದು ಅಧಿಸೂಚನೆ ಸ್ಪಷ್ಟಪಡಿಸಿದೆ.
ಬಿಬಿಎಂಪಿಯ ಮಾರುಕಟ್ಟೆ ಅಥವಾ ಆಸ್ತಿಗಳ ಪ್ರಭಾರ ಹೊಂದಿರುವ ವಿಶೇಷ ಆಯುಕ್ತರು ಅಥವಾ ವಲಯ ಆಯುಕ್ತರು ಪಾಲಿಕೆಯ ಸ್ಥಿರಾಸ್ತಿಗಳನ್ನು ಇ-ಪ್ರೊಕ್ಯೂಮೆಂಟ್ ಪೋರ್ಟಲ್ ಮುಖಾಂತರ ಸಾರ್ವಜನಿಕ ಹರಾಜು ಅಥವಾ ಟೆಂಡರ್ ಮೂಲಕವೇ ಗುತ್ತಿಗೆಗೆ ನೀಡಬೇಕು. ಪ್ರತಿಯೊಂದು ಗುತ್ತಿಗೆಯನ್ನು ಮತ್ತು ಪ್ರತಿಯೊಬ್ಬ ಗುತ್ತಿಗೆದಾರರು ಗುತ್ತಿಗೆ ನೀಡಿದ ಆಸ್ತಿಯನ್ನು ಯಾವ ಉದ್ದೇಶಕ್ಕಾಗಿ ನೀಡಲಾಗಿದೆಯೋ, ಅದೇ ಉದ್ದೇಶಕ್ಕಾಗಿ ಬಳಸತಕ್ಕದ್ದು.
ಮಾಸಿಕ ಗುತ್ತಿಗೆ ಮೊತ್ತ ಅಥವಾ ಬಾಡಿಗೆಯನ್ನು ಪಾವತಿಸದಿದ್ದಲ್ಲಿ, ಅದು ಗುತ್ತಿಗೆ ಕರಾರಿನ ಬಹುದೊಡ್ಡ ಉಲ್ಲಂಘನೆಯಾಗಿದ್ದು, ಗುತ್ತಿಗೆಯನ್ನು ಮಾರುಕಟ್ಟೆಗಳು ಮತ್ತು ಆಸ್ತಿ ನಿರ್ವಹಣೆಯ ಪ್ರಭಾರದಲ್ಲಿರುವ ವಿಶೇಷ ಆಯುಕ್ತರು ಅಥವಾ ವಲಯ ಆಯುಕ್ತರು 7 ದಿನಗಳ ನೋಟಿಸನ್ನು ನೀಡುವ ಮೂಲಕ ರದ್ದುಪಡಿಸಬಹುದು ಎಂದು ಅಧಿಸೂಚನೆ ತಿಳಿಸಿದೆ.
ಮಳಿಗೆ ಗುತ್ತಿಗೆ ನೀಡುವಲ್ಲಿ ಮೀಸಲಾತಿ ಅನ್ವಯ: ಮಳಿಗೆಗಳನ್ನು ಗುತ್ತಿಗೆ ನೀಡುವ ಸಂದರ್ಭದಲ್ಲಿ ಶೇ.17ರಷ್ಟು ಮೀಸಲಾತಿಯನ್ನು ಪರಿಶಿಷ್ಠ ಜಾತಿಗೆ ಸೇರಿರುವ ಸದಸ್ಯರಿಗೂ, ಶೇ.7 ರಷ್ಟು ಮೀಸಲಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಸದಸ್ಯರಿಗೂ ಮೀಸಲಿಡಬೇಕು. ಶೇ.2ರಷ್ಟು ಮಳಿಗೆಗಳನ್ನು ಶೇ.40ಕ್ಕಿಂತ ಕಡಿಮೆಯಿಲ್ಲದ ಅಂಗವೈಕಲ್ಯತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಮೀಸಲಿಡಬೇಕು. ಈ ನಿಯಮಗಳ ಅಡಿಯಲ್ಲಿನ ಈ ಹಂಚಿಕೆಯು ಅರ್ಹತೆ ಹೊಂದಿರುವ ಪ್ರವರ್ಗದ ವ್ಯಕ್ತಿಗಳ ನಡುವೆ ಬಹಿರಂಗ ಟೆಂಡರು ಅಥವಾ ಹರಾಜಿನ ಮೂಲಕವೇ ನಡೆಸಬೇಕು.