ವೃದ್ಧನೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಬಿಬಿಎಂಪಿ ಮಾರ್ಷಲ್‍ಗಳು : ವಿಡಿಯೋ ವೈರಲ್
ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಬ್ಯಾಗ್ ಮಾರಾಟ ಮಾಡುತ್ತಿದ್ದ ವೃದ್ಧನನ್ನು ಬಿಬಿಎಂಪಿಯ ಮಾರ್ಷಲ್‍ಗಳು ತಡೆದು, ಅಮಾನವೀಯವಾಗಿ ನಡೆದುಕೊಂಡಿರುವ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್‍ನಿಂದ ಪ್ರೇರೇಪಣೆ ಪಡೆದು ಕೆಲವು ಬಿಬಿಎಂಪಿಯ ಮಾರ್ಷಲ್‍ಗಳು ಈಗ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿಯು ಟೀಕಿಸಿದೆ.
ನಿಯತ್ತಾಗಿ ಕಷ್ಟಪಟ್ಟು ಇಳಿ ವಯಸ್ಸಿನಲ್ಲೂ ದುಡಿಯುವ ವೃದ್ಧನ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿರುವುದು ಮಜಾವಾದಿ ಸಿದ್ದರಾಮಯ್ಯ ಸರಕಾರ ಸೃಷ್ಟಿಸಿರುವ ಅರಾಜಕತೆಗೆ ಸಾಕ್ಷಿಯಾಗಿದೆ. ದುಡಿದು ತಿನ್ನುವ ಅಮಾಯಕರ ಮೇಲೆ ದೌರ್ಜನ್ಯ ಮಾತ್ರ ತಪ್ಪಿಲ್ಲ ಎಂದು ಉಲ್ಲೇಖಿಸಿದೆ.
‘ಮಾರ್ಷಲ್‍ಗಳು ಬ್ಯಾಗ್ ಮಾರಾಟ ಮಾಡುವ ವೃದ್ಧನಿಗೆ ಹಿಂಸೆ ನೀಡುವ ವಿಡಿಯೋ ವೈರಲ್ ಆಗುತ್ತಿದೆ. ಈ ಕುರಿತು ಕೆಳ ಹಂತದ ಅಧಿಕಾರಿಗಳು ಸ್ಪಷ್ಣನೆ ನೀಡಬೇಕು. ತಕ್ಷಣವೇ ಅಧಿಕೃತವಾಗಿ ಯಾವುದೇ ಮಾಹಿತಿ ನೀಡುವುದಿಲ್ಲ. ಕೆಳ ಹಂತದ ಅಧಿಕಾರಿ ಬಂದ ಬಳಿಕ ಮಾಹಿತಿಯನ್ನು ನೀಡಲಾಗುತ್ತದೆ’
ಆರ್. ವಿನೋಥಾ ಪ್ರಿಯಾ, ದಕ್ಷಿಣ ವಲಯ ಆಯುಕ್ತೆ