ಬೆಂಗಳೂರು | ಕೆಲಸಕ್ಕಿದ್ದ ಮನೆಯಲ್ಲೇ 15 ಕೋಟಿ ರೂ. ಮೌಲ್ಯದ ನಗ, ನಗದು ದೋಚಿದ ಆರೋಪ : ಭದ್ರತಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಬೆಂಗಳೂರು : ಭದ್ರತಾ ಸಿಬ್ಬಂದಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ನಗದು, ಚಿನ್ನಾಭರಣ ಸೇರಿದಂತೆ ಸುಮಾರು 15.15ಕೋಟಿ ರೂ.ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾದ ಆರೋಪದಡಿ ಇಲ್ಲಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಅರಿಹಂತ್ ಜ್ಯುವೆಲ್ಲರ್ಸ್ ಮಾಲಕ ಸುರೇಂದ್ರ ಕುಮಾರ್ ಜೈನ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ನೇಪಾಳ ಮೂಲದ ನಮ್ರಾಝ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸುರೇಂದ್ರ ಕುಮಾರ್ ಜೈನ್ ಅವರ ಅರಿಹಂತ್ ಜ್ಯುವೆಲ್ಲರ್ಸ್ ಶಾಪ್ನಲ್ಲಿ ನೇಪಾಳ ಮೂಲದ ನಮ್ರಾಝ್ 6 ತಿಂಗಳಿನಿಂದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದ. ಉಳಿದುಕೊಳ್ಳಲು ಮನೆ ವ್ಯವಸ್ಥೆ ಇರದ ನಮ್ರಾಝ್ನಿಗೆ ಸುರೇಂದ್ರ ಕುಮಾರ್ ಜೈನ್ ತಮ್ಮದೇ ಮನೆಯಲ್ಲಿ ಒಂದು ರೂಮ್ ಸಹ ನೀಡಿದ್ದರು.
ಭದ್ರತಾ ಸಿಬ್ಬಂದಿ ಕೆಲಸದ ಜೊತೆಗೆ ಸುರೇಂದ್ರ ಕುಮಾರ್ ಜೈನ್ ಅವರ ಮನೆಯ ಗಾರ್ಡನ್ನಲ್ಲಿ ಗಿಡಗಳಿಗೆ ನೀರು ಹಾಕುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳನ್ನು ನಮ್ರಾಝ್ ಮಾಡಿಕೊಂಡಿದ್ದ. ನವೆಂಬರ್ 1ರಂದು ಜಾತ್ರೆಯ ನಿಮಿತ್ತ ಸುರೇಂದ್ರ ಕುಮಾರ್ ಜೈನ್ ಅವರ ಕುಟುಂಬ ಗುಜರಾತ್ನ ಗಿರ್ನಾರಿಗೆ ತೆರಳಿತ್ತು.
ಈ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ನಗದು ಸೇರಿದಂತೆ ಸುಮಾರು 15.15 ಕೋಟಿ ರೂ. ಮೌಲ್ಯದ ವಸ್ತುಗಳನ್ನು ದೋಚಿರುವ ನಮ್ರಾಝ್ ಪರಾರಿಯಾಗಿದ್ದು, ನವೆಂಬರ್ 7ರಂದು ಸುರೇಂದ್ರ ಕುಮಾರ್ ಜೈನ್ ಅವರ ಕುಟುಂಬ ಮನೆಗೆ ಮರಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ತಕ್ಷಣ ವಿಜಯನಗರ ಪೊಲೀಸ್ ಠಾಣೆಗೆ ಸುರೇಂದ್ರ ಕುಮಾರ್ ಜೈನ್ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್, ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಹುಡುಕಾಟ ಆರಂಭಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.