ಬೆಂಗಳೂರಿನಲ್ಲಿ ಮಳೆ ಅಬ್ಬರ : ಸಾರ್ವಜನಿಕರ ಸಂಚಾರಕ್ಕೆ ತೊಂದರೆ
ಬೆಂಗಳೂರು : ನಗರದಲ್ಲಿ ಸೋಮವಾರ ಸಂಜೆ ಮಳೆ ಅಬ್ಬರಿಸಿದ್ದು, ಕೆಲ ಕಾಲ ನಗರದ ವಿವಿಧ ಬಡಾವಣೆಗಳಲ್ಲಿ ನೀರು ನಿಂತ್ತಿತ್ತು. ಅಲ್ಲದೆ ರಸ್ತೆಗಳಲ್ಲಿ ನೀರು ನುಗ್ಗಿದ ಪರಿಣಾಮ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡಿತು.
ಕೋರಮಂಗಲ, ಡೈರಿ ವೃತ್ತ, ಲಾಲ್ ಬಾಗ್, ಮಡಿವಾಳ, ಎಂಜಿ ರಸ್ತೆ, ಇಂದಿರಾನಗರ, ಮೆಜೆಸ್ಟಿಕ್ ಸುತ್ತಮುತ್ತ, ಹೆಬ್ಬಾಳ, ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ದೊಮ್ಮಲೂರು, ಜಯನಗರ, ಚಾಮರಾಜಪೇಟೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೆಲ ಹೊತ್ತು ವ್ಯಾಪಕ ಮಳೆಯಾಗಿದೆ.
ಇನ್ನೂ ಕೆಂಗೇರಿ, ಆರ್‌ಆರ್ ನಗರ, ನಾಯಂಡಹಳ್ಳಿ, ಚಂದ್ರಾ ಬಡಾವಣೆ, ವಿಜಯನಗರ, ರಾಜಾಜಿನಗರ, ಯಶವಂತಪುರ, ವಿದ್ಯಾರಣ್ಯಪುರ ಸೇರಿದಂತೆ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.
ಮಳೆ ಅಬ್ಬರಕ್ಕೆ ರಿಚ್‍ಮಂಡ್ ಟೌನ್ ಸುತ್ತಮುತ್ತಲಿನ ರಸ್ತೆಗಳು ಜಲಾವೃತವಾಗಿದ್ದವು. ಅಲೆಕ್ಸಾಂಡ್ರಿಯಾ ಸ್ಟ್ರೀಟ್‍ನಲ್ಲಿ ಮಳೆ ನೀರು ತುಂಬಿಕೊಂಡಿದ್ದು, ನೀರು ತುಂಬಿದ ರಸ್ತೆಯಲ್ಲೇ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ. ಮತ್ತೆ ಕೆಲ ಜನರು ಮಳೆಯಿಂದಾಗಿ ಅಂಗಡಿಗಳ ಬಳಿ ನಿಂತು ಆಶ್ರಯ ಪಡೆದುಕೊಂಡಿದ್ದರು.
ಮೈಸೂರು ಬ್ಯಾಂಕ್ ಸರ್ಕಲ್, ವಿಧಾನ ಸೌಧ ಸುತ್ತಮುತ್ತ ಕೂಡ ಮಳೆ ಆರಂಭವಾಗಿದ್ದು, ನಗರದ ಹೃದಯ ಭಾಗವಾದ ಕಾರ್ಪೊರೇಷನ್, ಮಾರುಕಟ್ಟೆ, ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಳೆಯಲ್ಲೇ ದ್ವಿಚಕ್ರ ವಾಹನ ಸವಾರರು ನೆನೆದುಕೊಂಡು ಹೋಗುತ್ತಿರುವ ದೃಷ್ಯಗಳು ಕಂಡುಬಂದವು.