ಬೆಂಗಳೂರು | ನಿರ್ಜನ ಪ್ರದೇಶದಲ್ಲಿ ಪತ್ನಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಪತಿ ಸೆರೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ಪತ್ನಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ಪತಿಯನ್ನು ಇಲ್ಲಿನ ಕೆಂಗೇರಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಗೌರಿ(30) ಎಂಬಾಕೆಯನ್ನು ಹತ್ಯೆಗೈದಿದ್ದ ನಾಗೇಶ್(32) ಎಂಬಾತನನ್ನು ಬಂಧಿಸಲಾಗಿದೆ. ಆ.13ರ ಮಂಗಳವಾರ ರಾತ್ರಿ ಜಟ್ಟಿಗನಹಳ್ಳಿಯ ನಿರ್ಜನ ಪ್ರದೇಶದಲ್ಲಿ ಘಟನೆ ನಡೆದಿತ್ತು. ಎಂಟು ವರ್ಷಗಳ ಹಿಂದೆ ನಾಗೇಶ್ ಹಾಗೂ ಗೌರಿಯ ಮದುವೆಯಾಗಿತ್ತು. ಮೊದಲ ಗಂಡನಿಂದ ದೂರವಾಗಿದ್ದ ಗೌರಿಯನ್ನು ವರಿಸಿದ್ದ ನಾಗೇಶ್, ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದ ಆರೋಪಿ, ಕೆಲ ವರ್ಷಗಳಿಂದ ಆಕೆಯನ್ನು ಬೇರೆಡೆ ಬಿಟ್ಟು ಒಬ್ಬನೇ ವಾಸವಾಗಿದ್ದ ಎನ್ನಲಾಗಿದೆ.
ಒಂದು ವಾರದ ಹಿಂದೆ ಪತ್ನಿಯನ್ನು ಪುನಃ ಕರೆತಂದು ಮಂಗಳವಾರ ರಾತ್ರಿ ಜಟ್ಟಿಗನಹಳ್ಳಿಯ ಸ್ಮಶಾನದ ಬಳಿ ಕರೆದೊಯ್ದಿದ್ದಾನೆ. ಈ ವೇಳೆ ಆಕೆಯ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದ. ಬಳಿಕ ಕೆಲ ಸಂಬಂಧಿಕರು, ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿ ಪರಾರಿಯಾಗಿದ್ದ. ಆ.14ರ ಬುಧವಾರ ಸ್ಥಳೀಯರು ಮೃತದೇಹ ಗಮನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡ ಕೆಂಗೇರಿ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.