ಬೆಂಗಳೂರು | ಕೌಟುಂಬಿಕ ಕಲಹ : ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಗೃಹಿಣಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ಪತಿಯ ನಿರಂತರ ಕಿರುಕುಳ, ಅನೈತಿಕ ಸಂಬಂಧವನ್ನು ತಾಳಲಾರದೆ ಪತ್ನಿಯು ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಸಮೀಪದ ಅಕ್ಷಯನಗರದಲ್ಲಿ ನಡೆದಿದೆ.
ಮೃತ ಯುವತಿಯನ್ನು ಅನುಷಾ ಎಂದು ಗುರುತಿಸಲಾಗಿದೆ. ಎರಡು ದಿನದ ಹಿಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಅನುಷಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ. ಚಿಕಿತ್ಸೆಗೆ ಸ್ಪಂದಿಸದ ಅನುಷಾ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಐದು ವರ್ಷಗಳ ಹಿಂದೆ ಶ್ರೀಹರಿ ಎಂಬವರ ಜತೆಗೆ ಅನುಷಾ ವಿವಾಹವಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಇದ್ದು, ಇತ್ತೀಚೆಗೆ ಪತಿ ಶ್ರೀಹರಿಗೆ ಮತ್ತೊಬ್ಬ ಯುವತಿಯ ಜತೆಗೆ ಅನೈತಿಕ ಸಂಬಂಧವಿರುವುದು ಪತ್ನಿ ಅನುಷಾಗೆ ಗಮನಕ್ಕೆ ಬಂದಿದೆ. ಇದೇ ವಿಷಯಕ್ಕೆ ದಂಪತಿಯ ನಡುವೆ ಮನಸ್ಥಾಪಕ್ಕೆ ಕಾರಣವಾಗಿ, ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಜಗಳವಾಗಿ, ಮನನೊಂದ ಅನುಷಾ ಸ್ನಾನ ಗೃಹದಲ್ಲಿ ಪೆಟ್ರೋಲ್ ಮೈಮೆಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಅನುಷಾರ ಕಿರುಚಾಟ ಕೇಳಿ, ಕುಟುಂಬಸ್ಥರು ಬಾಗಿಲು ಮುರಿದು ಬೆಂಕಿ ನಂದಿಸಿ, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.