ಬೆಂಗಳೂರು | ಲಂಚದ ಆರೋಪ : ಭೋವಿ ನಿಗಮ ಅವ್ಯವಹಾರ ಪ್ರಕರಣದ ತನಿಖಾಧಿಕಾರಿ ಅಮಾನತು
ಬೆಂಗಳೂರು : ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅವ್ಯವಹಾರ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಯನ್ನು ಲಂಚ ಪಡೆದ ಆರೋಪದಡಿ ಅಮಾನತುಗೊಳಿಸಲಾಗಿದೆ.
ಸಿಐಡಿ ಪೊಲೀಸ್ ಮಹಾನಿರ್ದೇಶಕ ಎಂ.ಎಂ.ಸಲೀಂ ಅವರು ಪ್ರಕರಣದ ತನಿಖಾಧಿಕಾರಿಯಾಗಿದ್ದ ಇನ್ಸ್ಪೆಕ್ಟರ್ ಇ.ಡಿ.ನಾಗರಾಜ್ ಎಂಬುವರನ್ನು ಅಮಾನತು ಮಾಡಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರೂ. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅವ್ಯವಹಾರ ಪ್ರಕರಣ ಸಂಬಂಧ ಬೆಂಗಳೂರು, ಕಲಬುರಗಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಕೋಟ್ಯಂತರ ರೂ. ಅಕ್ರಮವಾಗಿದ್ದರಿಂದ ಕೆಲ ದಿನಗಳ ಹಿಂದಷ್ಟೇ ಸರಕಾರ, ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು. ಪ್ರಾಥಮಿಕ ತನಿಖೆಯಲ್ಲಿ 60 ಕೋಟಿ ರೂ.ಗೂ ಹೆಚ್ಚು ಅಕ್ರಮ ನಡೆದಿರುವ ಮಾಹಿತಿ ದೊರೆತಿತ್ತು.
ಈ ಸಂಬಂಧ ನಿಗಮದ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ನಾಗರಾಜಪ್ಪ, ಹಾಗೂ ಲೀಲಾವತಿ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಈ ಆರೋಪಿಗಳಿಂದ ಹಣ ಪಡೆದ ಆರೋಪ ತನಿಖಾಧಿಕಾರಿ ನಾಗರಾಜ್ ಅವರ ಮೇಲಿದೆ. ಈ ಸಂಬಂಧ ತನಿಖೆ ನಡೆಸಿದಾಗ ಮೇಲ್ನೋಟಕ್ಕೆ ಹಣ ಪಡೆದಿರುವುದು ಗೊತ್ತಾಗಿದೆ. ಈ ಸಂಬಂಧ ಅವರನ್ನು ಅಮಾನತು ಮಾಡಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.