ಸಿಎಂ ಸಿದ್ದರಾಮಯ್ಯ ಕುರಿತು ಸುಳ್ಳು ಅರೋಪ | ಪ್ರಧಾನಿ ಮೋದಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು : ಹರಿಯಾಣ ಚುನಾವಣಾ ಪ್ರಚಾರದ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ಸುಳ್ಳು ಅರೋಪ ಮಾಡಿರುವ ಪ್ರಧಾನಿ ನರೇಂದ್ರಮೋದಿ ಅವರ ನಡೆ ಖಂಡಿಸಿ ಗುರುವಾರ ನಗರದ ಕಾಂಗ್ರೆಸ್ ಭವನದ ಎದುರು ಕಾಂಗ್ರೆಸ್ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಸ್.ಮನೋಹರ್, ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಚಾರಿಗಳು, ಅತ್ಯಚಾರಿಗಳು, ಭೂಹಗರಣದಲ್ಲಿ ಸಿಲುಕಿರುವ ಬಿಜೆಪಿ, ಜೆಡಿಎಸ್ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಬಿ.ವೈ.ವಿಜಯೇಂದ್ರ, ಪ್ರಜ್ವಲ್ ರೇವಣ್ಣನಂತಹವರ ಜೊತೆಯಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ಇದು ಇಡಿ ರಾಷ್ಟ್ರದ ಜನರು ತಲೆತಗ್ಗಿಸುವ ವಿಚಾರವಾಗಿದೆ. ಬಿಜೆಪಿಯೇತರ ರಾಜ್ಯ ಸರಕಾರಗಳನ್ನು ಉರುಳಿಸಲು ಕೇಂದ್ರ ಬಿಜೆಪಿ ಸರಕಾರ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಸುಳ್ಳು ಅರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೊಡಲೇ ರಾಜ್ಯದ ಜನತೆಗೆ ಕ್ಷಮೆ ಹೇಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಆನಂದ್, ಪುಟ್ಟರಾಜು, ಪ್ರಕಾಶ್, ಚಂದ್ರಶೇಖರ್, ಹೇಮರಾಜು, ಉಮೇಶ್, ರವಿ ಮತ್ತಿತರರು ಹಾಜರಿದ್ದರು.