ಸಾಲುಮರದ ತಿಮ್ಮಕ್ಕನವರಿಂದ ಮನುಕುಲ ರಕ್ಷಿಸುವ ಕೆಲಸ : ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು: ಯಾವುದೇ ಸ್ವಾರ್ಥವಿಲ್ಲದೇ ಮರಗಳನ್ನೆ ತನ್ನ ಮಕ್ಕಳೆಂದು ಭಾವಿಸಿ ಮನುಕುಲವನ್ನು ರಕ್ಷಿಸುವ ಬಹುದೊಡ್ಡ ಕೆಲಸವನ್ನು ಸಾಲುಮರದ ತಿಮ್ಮಕ್ಕನವರು ಮಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುರುವಾರ ಇಲ್ಲಿನ ವಸಂತನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ವೃಕ್ಷಮಾತೆ, ಪದ್ಮಶ್ರೀ, ಸಾಲುಮರದ ತಿಮ್ಮಕ್ಕರ ಜನ್ಮದಿನದ ಸಂಭ್ರಮ ಹಾಗೂ ಸಾಲುಮರದ ತಿಮ್ಮಕ್ಕ ‘ನ್ಯಾಷನಲ್ ಗ್ರೀನರಿ ಅವಾರ್ಡ್' ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಬಳಿಕ ದೇಶದಾದ್ಯಂತ ನಡೆಯುವ ‘ಮಹಾವೃಕ್ಷ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಳೆ ಬರಬೇಕಾದ ಸಂದರ್ಭಕ್ಕೆ ಬರುತ್ತಿಲ್ಲ. ಒಂದು ಭಾಗದಲ್ಲಿ ಮಳೆಯಾದರೆ, ಮತ್ತೊಂದು ಭಾಗದಲ್ಲಿ ಮಳೆಯಾಗುತ್ತಿಲ್ಲ. ಭೂಮಿಯ ಹಸಿರು ಪದರು ಕಡಿಮೆಯಾಗಿರುವುದೇ ಕಾರಣ. ಭಾರತದಲ್ಲಿ 21.7 ಹಸಿರು ಪದರ ಇದೆ. ಕರ್ನಾಟಕದಲ್ಲಿ ಮತ್ತಷ್ಟು ಕಡಿಮೆಯಾಗಿದೆ. ಇದರಿಂದ ಭೂಮಿಯ ಉಷ್ಣಾಂಶ ಹೆಚ್ಚಾಗುತ್ತಿದೆ. ಇದರ ಪರಿಣಾಮ ಕೋಟ್ಯಂತರ ಕೀಟಗಳು ನಾಶವಾಗುತ್ತಿವೆ. ಕೀಟಗಳು ನಾಶವಾದರೆ ಮನುಕುಲಕ್ಕೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದರು.
ಬಹುತೇಕ ದೇಶಗಳಲ್ಲಿ ಅಗ್ನಿ ಅವಘಡದಿಂದ ಕಾಡು ನಾಶವಾಗಿದೆ. ಅರಣ್ಯ ಭೂಮಿ ಕ್ಷೀಣಿಸುತ್ತಿದೆ. ಇದು ಮನುಕುಲಕ್ಕೆ ಅಪಾಯಕಾರಿ. ತಾಯಿ ಸಾಲುಮರದ ತಿಮ್ಮಕ್ಕನಿಗೆ ಇದ್ಯಾವುದರ ಬಗ್ಗೆಯೂ ಗೊತ್ತಿಲ್ಲ. ಆದರೂ, ಮರಗಳನ್ನು ಮಕ್ಕಳೆಂದು ಭಾವಿಸಿ ಬೆಳೆಸುವ ಮುಖೇನ ಮನುಕುಲವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ವಿಶ್ವಕ್ಕೆ ಸಂದೇಶ ಕೊಟ್ಟಿದ್ದಾರೆ. ಅವರ ಸಾಧನೆಯನ್ನು ಎಷ್ಟು ಶ್ಲಾಘಿಸಿದರು ಸಾಲುವುದಿಲ್ಲ ಎಂದು ಅವರು ಹೇಳಿದರು.
ಚಿತ್ರದುರ್ಗದ ಭೋವಿ ಮಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅರಣ್ಯ ಸಚಿವ ಈಶ್ವರ್ ಖಂಡ್ರೆ, ವೈದ್ಯ ಡಾ.ರಮಣರಾವ್, ಅಪೊಲೋ ಆಸ್ಪತ್ರೆ ಮುಖ್ಯಸ್ಥ ಡಾ. ಗೋವಿಂದಯ್ಯ ಯತೀಶ್, ಡಾ.ರಜನಿ ಸುರೇಂದರ್ ಭಟ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.