ನ.23-24ರಂದು ಬೆಂಗಳೂರಿನಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಸಭೆ
ಬೆಂಗಳೂರು : ಬೆಂಗಳೂರಿನ ದಾರುಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನಲ್ಲಿ ನ.23 ಹಾಗೂ 24ರಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸಮಾವೇಶ ಆಯೋಜಿಸಲಾಗಿದೆ.
ಈ ಹಿಂದೆ 1975 ಹಾಗೂ 2000ರಲ್ಲಿ ದಾರುಲ್ ಉಲೂಮ್ ಸಬೀಲುರ್ರಶಾದ್‍ನಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸಭೆಯನ್ನು ಆಯೋಜಿಸಲಾಗಿತ್ತು. ಇದೀಗ 24 ವರ್ಷಗಳ ನಂತರ ಮತ್ತೊಮ್ಮೆ ಈ ಮಹತ್ವದ ಸಭೆಯನ್ನು ಇಲ್ಲಿ ಆಯೋಜಿಸಲಾಗುತ್ತಿದೆ.
ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸಾಮಾನ್ಯ ಸಭೆಯಲ್ಲಿ ಮಂಡಳಿಯ ಸದಸ್ಯರು, ದೇಶದ ಎಲ್ಲ ರಾಜ್ಯಗಳ ವಿದ್ವಾಂಸರು, ಬುದ್ಧಿಜೀವಿಗಳು ಮತ್ತು ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ. ದೇಶದಲ್ಲಿ ಶರಿಯಾ ಕಾನೂನು ಮತ್ತು ಇಸ್ಲಾಮ್ ಧರ್ಮದ ಆಚರಣೆಗಳ ರಕ್ಷಣೆಗಾಗಿ ಅಗತ್ಯ ಕಾರ್ಯತಂತ್ರಗಳ ಕುರಿತು ಚರ್ಚೆಗಳು ನಡೆಯಲಿವೆ.
ನ.23ರಂದು ಬೆಳಗ್ಗೆಯಿಂದ ನ.24ರ ಸಂಜೆಯವರೆಗೆ ದಾರುಲ್ ಉಲೂಮ್ ಸಬೀಲುರ್ರಶಾದ್ ಆವರಣದಲ್ಲಿ ಸರಣಿ ಸಭೆಗಳು ನಡೆಯಲಿವೆ. ದೇಶದ ವಿವಿಧ ಭಾಗಗಳಿಂದ ಆಗಮಿಸುವ ಗಣ್ಯ ಅತಿಥಿಗಳ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಸಬೀಲುರ್ರಶಾದ್ ಕ್ಯಾಂಪಸ್‍ನಲ್ಲಿಯೆ ಮಾಡಲಾಗುವುದು.
ಅಮೀರೆ ಶರೀಅತ್ ಕರ್ನಾಟಕ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ರಚಿಸಲಾಗಿರುವ ಸ್ವಾಗತ ಸಮಿತಿಯು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸಭೆಯ ಅಗತ್ಯ ಸಿದ್ಧತೆಗಳಲ್ಲಿ ತೊಡಗಿದೆ. ನ.24ರಂದು ಸಂಜೆ ನಗರದಲ್ಲಿ ‘ಶರೀಯಾ ಮತ್ತು ಔಕಾಫ್ ರಕ್ಷಣೆ’ ವಿಷಯದ ಕುರಿತು ಬೃಹತ್ ಸಾರ್ವಜನಿಕ ಸಭೆಯೂ ನಡೆಯಲಿದೆ. ಈ ಸಾರ್ವಜನಿಕ ಸಭೆಯ ಸ್ಥಳವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.