ಬೆಂಗಳೂರು | ಅಂಚೆ ಮೂಲಕ ಆಮದು ಮಾಡಿಕೊಳ್ಳಲಾಗಿದ್ದ 21.17ಕೋಟಿ ರೂ.ಮೌಲ್ಯದ ಡ್ರಗ್ಸ್ ಜಪ್ತಿ
ಸಾಂದರ್ಭಿಕ ಚಿತ್ರ
ಬೆಂಗಳೂರು : ವಿದೇಶದಿಂದ ಅಂಚೆ ಮೂಲಕ ಆಮದು ಮಾಡಿಕೊಳ್ಳಲಾಗಿದ್ದ ಬರೋಬ್ಬರಿ 21.17 ಕೋಟಿ ರೂ. ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನು ಬೆಂಗಳೂರಿನ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಪೋಸ್ಟಲ್ ಮೂಲಕ ಬೆಂಗಳೂರಿಗೆ ಮಾದಕ ಪದಾರ್ಥಗಳು ಸರಬರಾಜಾಗುತ್ತಿರುವ ಕುರಿತು ನಿಗಾವಹಿಸಿದ್ದ ಸಿಸಿಬಿ ಪೊಲೀಸರು, ಸೆಪ್ಟೆಂಬರ್ನಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಮುಂದುವರೆದ ಭಾಗವಾಗಿ, ಚಾಮರಾಜಪೇಟೆಯಲ್ಲಿರುವ ಫಾರಿನ್ ಪೋಸ್ಟ್ ಆಫೀಸ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು.
ಶ್ವಾನದಳ ಬಳಸಿ ತಪಾಸಣೆ ಕೈಗೊಂಡಾಗ ಯುಎಸ್ಎ, ಯುಕೆ, ಥಾಯ್ಲೆಂಡ್, ನೆದರ್ಲ್ಯಾಂಡ್ ದೇಶಗಳಿಂದ ಬಂದಿದ್ದ 3,500 ಪಾರ್ಸೆಲ್ಗಳ ಪೈಕಿ 606 ಪಾರ್ಸೆಲ್ಗಳಲ್ಲಿ ವಿವಿಧ ಮಾದರಿಯ ಮಾದಕ ಪದಾರ್ಥಗಳು ಪತ್ತೆಯಾಗಿವೆ.
ಒಟ್ಟಾರೆ, 28 ಕೆ.ಜಿ ಹೈಡ್ರೋ ಗಾಂಜಾ, 2569 ಎಲ್.ಎಸ್.ಡಿ, 1 ಕೆ.ಜಿ ಎಂಡಿಎಂಎ ಕ್ರಿಸ್ಟಲ್ಸ್, 11,908 ಎಕ್ಸ್ಟಸಿ ಮಾತ್ರೆಗಳು, 770 ಗ್ರಾಂ ಹೆರಾಯಿನ್, 102 ಗ್ರಾಂ ಕೊಕೇನ್, 6.280 ಕೆ.ಜಿ ಆಂಫಿಟಮೈನ್, 336 ಗ್ರಾಂ ಚರಸ್, 1 ಕೆ.ಜಿ ಗಾಂಜಾ ಎಣ್ಣೆ, 445 ಗ್ರಾಂ ಮ್ಯಾಥಕ್ಲೀನಾ, 11 ಇ-ಸಿಗರೇಟ್, 102 ಎಂ.ಎಲ್. ನಿಕೋಟಿನ್, 400 ಗ್ರಾಂ ಟ್ಯೊಬ್ಯಾಕೋ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.