ಬೆಂಗಳೂರು | ಯುವತಿ ಮೇಲೆ ಅತ್ಯಾಚಾರ, ಜಾತಿನಿಂದನೆ ಆರೋಪ : ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ(PTI)
ಬೆಂಗಳೂರು: ವ್ಯಕ್ತಿಯೊರ್ವ ದಲಿತ ಸಮುದಾಯದ ಯುವತಿಗೆ ಮತ್ತೇರಿಸುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಲ್ಲದೆ, ವಿಡಿಯೋ ಚಿತ್ರೀಕರಣ ಮಾಡಿಕೊಂಡು ಜಾತಿನಿಂದನೆ ಮಾಡಿರುವ ಆರೋಪ ಸಂಬಂಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
26 ವರ್ಷದ ದಲಿತ ಸಮುದಾಯದ ಯುವತಿ ನೀಡಿರುವ ದೂರಿನ ಅನ್ವಯ ಆಂಧ್ರಪ್ರದೇಶ ಮೂಲದ ಅಕ್ಕಿ ಲಕ್ಷ್ಮೀರೆಡ್ಡಿ ಎಂಬಾತನ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಯುವತಿ, 2019ರಲ್ಲಿ ಆರ್ ಟಿ ನಗರದ ಖಾಸಗಿ ಬ್ಯಾಂಕ್ವೊಂದರ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಯುವತಿ ಬಳಿ ಕ್ರೆಡಿಟ್ ಕಾರ್ಡ್ ಪಡೆಯಲು ಬಂದಿದ್ದ ಆಂಧ್ರಪ್ರದೇಶ ಮೂಲದ ಆರೋಪಿ ಲಕ್ಷ್ಮೀರೆಡ್ಡಿ ಪರಿಚಯವಾಗಿದ್ದು, ಅದೇ ವರ್ಷ ತನ್ನ ಸಹೋದರಿಯ ನಿವಾಸದಲ್ಲಿ ಕಾರ್ಯಕ್ರಮವಿದೆ ಎಂದು ಯುವತಿಯನ್ನು ಕರೆದೊಯ್ದು ಮತ್ತೇರಿಸುವ ಔಷಧ ನೀಡಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆನಂತರ, ಕೃತ್ಯದ ವಿಡಿಯೊ ಚಿತ್ರೀಕರಿಸಿಕೊಂಡಿದ್ದ ಆರೋಪಿ, ನಂತರದ ದಿನಗಳಲ್ಲಿ ತನಗೆ ಬೆದರಿಸಿ ನಿರಂತರವಾಗಿ ಲೈಂಗಿಕ ಶೋಷಣೆಗೈದಿದ್ದಾನೆ. ತನ್ನ ಜಾತಿ ಹಾಗೂ ತಾಯಿಯ ಕುರಿತು ಕೀಳು ಭಾಷೆಯಲ್ಲಿ ನಿಂದಿಸಿದ್ದು, ಯುವತಿ ಮನೆಯಲ್ಲಿದ್ದ ಅಂಬೇಡ್ಕರ್ ಅವರ ಫೋಟೋ ತೆಗೆದುಹಾಕುವಂತೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದೀಗ ಸಂತ್ರಸ್ತ ಯುವತಿ ನೀಡಿರುವ ದೂರಿನ ಅನ್ವಯ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.