ಬೆಂಗಳೂರು | ಚಿನ್ನದಂಗಡಿ ಮಾಲಕನಿಗೆ ವಂಚನೆ ಪ್ರಕರಣ : ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರು
ವರ್ತೂರು ಪ್ರಕಾಶ್
ಬೆಂಗಳೂರು : ಚಿನ್ನದಂಗಡಿ ಮಾಲಕನಿಗೆ ವಂಚಿಸಿದ ಪ್ರಕರಣದ ಆರೋಪಿ ಮಹಿಳೆ ಜತೆ ನಂಟು ಪ್ರಕರಣ ಸಂಬಂಧ ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಇಲ್ಲಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು.
ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ಪರಿಚಯಿಸಿಕೊಂಡು ಚಿನ್ನಾಭರಣ ಮಳಿಗೆ ಮಾಲಕರಿಗೆ ವಂಚಿಸಿದ ಆರೋಪದಡಿ ಶ್ವೇತಾ ಗೌಡ ಎಂಬ ಮಹಿಳೆಯನ್ನು ಡಿ. 23ರಂದು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದರು.
ಆ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಆರೋಪದಡಿ ವರ್ತೂರು ಪ್ರಕಾಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು.ಅದರಂತೆ ಮಂಗಳವಾರ ಪೊಲೀಸರೆದುರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು.
ಇನ್ನೂ, ಈ ಕುರಿತು ಪ್ರತಿಕ್ರಿಸಿದ ವರ್ತೂರು ಪ್ರಕಾಶ್,ಆರೋಪಿ ಮಹಿಳೆ ನನ್ನ ಸ್ನೇಹಿತೆ ಅಲ್ಲ, ಅದೆಲ್ಲವೂ ಸುಳ್ಳು ಮಾಹಿತಿ. ಐದಾರು ತಿಂಗಳ ಹಿಂದೆ ಆಕೆಯ ಪರಿಚಯವಾಗಿದ್ದು ನಿಜ. ರಾಜಕಾರಣಿಗಳು ಎಂದಮೇಲೆ ಬೇರೆ ಬೇರೆ ಜನರು ಭೇಟಿಯಾಗುವುದು ಸಹಜ. ಆದರೆ, ನನ್ನ ಹೆಸರು ಬಳಸಿಕೊಂಡು ಆಕೆ ಚಿನ್ನಾಭರಣ ಪಡೆದು ವಂಚಿಸಿರುವುದು ಪೊಲೀಸರ ಮೂಲಕವೇ ನನಗೆ ತಿಳಿಯಿತು ಎಂದರು.