ಬೆಂಗಳೂರು | ಕಳವು ಪ್ರಕರಣ : ಓರ್ವನ ಬಂಧನ, ಚಿನ್ನಾಭರಣ ಜಪ್ತಿ
ಬೆಂಗಳೂರು : ಮನೆಗಳ ಬೀಗ ಮುರಿದು ಕಳವು ಮಾಡಿದ್ದ ಆರೋಪ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿರುವ ಇಲ್ಲಿನ ಹೆಣ್ಣೂರು ಠಾಣೆ ಪೊಲೀಸರು 39.62 ಲಕ್ಷ ಮೌಲ್ಯದ 556 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ 200 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಚಳ್ಳಕೆರೆಯಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾಗ ದುಷ್ಕರ್ಮಿಗಳು ಮನೆ ಒಳ ನುಗ್ಗಿ ಕೊಠಡಿಯ ಬೀರುವಿನಲ್ಲಿಟ್ಟಿದ್ದ 20 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ, ಹಾಗೂ 30 ಸಾವಿರ ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದು, ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ ಆರೋಪಿಯನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಚೀಲ ಪರೀಶಿಲಿಸಿದಾಗ, ಅದರಲ್ಲಿ ಒಂದು ಸ್ಕೂಡ್ರೈವ್, ಚಿಕ್ಕದಾದ ಕಬ್ಬಿಣದ ರಾಡ್ ಹಾಗೂ ಕಟ್ಟಿಂಗ್ ಪ್ಲೇಯರ್ ಇರುವುದು ಕಂಡು ಬಂದಿದೆ.ಆತನನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಮನೆಗಳ್ಳತನ ಬೆಳಕಿಗೆ ಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.