ಬೆಂಗಳೂರು | ಸಹೋದರನನ್ನು ಹತ್ಯೆಗೈದ ಆರೋಪಿಯ ಬಂಧನ
ಬೆಂಗಳೂರು : ಸಹೋದರನನ್ನು ಹತ್ಯೆಗೈದಿರುವ ಆರೋಪದಡಿ ಓರ್ವನನ್ನು ಇಲ್ಲಿನ ಕೆಜಿಹಳ್ಳಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಇಲ್ಲಿನ ಅನ್ವರ್ ಲೇಔಟ್‍ನ ಅಕ್ರಂ ಬೇಗ್(28) ಹತ್ಯೆ ಆಗಿದ್ದು, ಕೃತ್ಯವೆಸಗಿದ ಆರೋಪದಡಿ ಅಕ್ಬರ್ ಬೇಗ್‍ನನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮೃತ ಅಕ್ರಂ ಬೇಗ್ ತಾಯಿಗೆ ಮೂವರು ಮಕ್ಕಳಿದ್ದು, ಹಿರಿಯ ಪುತ್ರ ಅಕ್ಬರ್ ಮತ್ತು ಮಗಳು ಬೇರೆ ಕಡೆ ವಾಸವಿದ್ದರು. ತಾಯಿಯ ಜೊತೆ ಕಿರಿಯ ಪುತ್ರ ಅಕ್ರಂ ಬೇಗ್ ಒಬ್ಬನೇ ವಾಸವಿದ್ದ. ಅಕ್ರಂ ಪ್ರತಿದಿನ ಮದ್ಯ ಸೇವಿಸಿ ಬಂದು ತಾಯಿಗೆ ಹಿಂಸೆ ನೀಡುತ್ತಿದ್ದ. ಬುಧವಾರ ರಾತ್ರಿಯೂ ಬಂದು ತಾಯಿ ಜತೆ ಜಗಳ ಮಾಡಿದ್ದಾನೆ ಎನ್ನಲಾಗಿದೆ.
ಇದೇ ವೇಳೆ ಹಿರಿಯ ಪುತ್ರ ಅಕ್ಬರ್ ಮನೆಗೆ ಬಂದಿದ್ದು, ಕೋಪದಲ್ಲಿ ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಕ್ರಂ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರಗಾಯಗೊಂಡ ಅಕ್ರಂನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಅಕ್ರಂ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.