ಬೆಂಗಳೂರು | ಮಾದಕ ವಸ್ತು ಮಾರಾಟ : ವಿದೇಶಿ ಪ್ರಜೆಗೆ 15 ವರ್ಷ ಜೈಲು ಶಿಕ್ಷೆ
ಬೆಂಗಳೂರು : ಮಾದಕ ಪದಾರ್ಥ ಮಾರಾಟ ಮಾಡಲು ಯತ್ನಿಸಿದ್ದ ವಿದೇಶಿ ಪ್ರಜೆಯೊರ್ವನಿಗೆ 15 ವರ್ಷ ಜೈಲು ಶಿಕ್ಷೆ ಮತ್ತು 1.75 ಲಕ್ಷ ರೂ. ದಂಡ ವಿಧಿಸಿ ನಗರದ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶಿಸಿದೆ.
ನೈಜೀರಿಯಾ ಪ್ರಜೆ ಒಕೋರೊ ಕ್ರಿಶ್ಚಿಯಾನ್‍ಗೆ 15 ವರ್ಷ ಜೈಲು ಶಿಕ್ಷೆ, 1.75 ಲಕ್ಷ ರೂ. ದಂಡ ಹಾಗೂ ಬೆಂಗಳೂರಿನ ಟಿ.ಸಿ.ಪಾಳ್ಯದ ನಿವಾಸಿ ರೋಹಿತ್ ಕ್ರಿಸ್ಟೋಫರ್‍ಗೆ 14 ವರ್ಷ ಜೈಲು ಶಿಕ್ಷೆ, 1.50 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದು, ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ವಿ.ಅಶ್ವತ್ಥ್ ನಾರಾಯಣ ವಾದ ಮಂಡಿಸಿದ್ದರು.
2021ರ ಫೆಬ್ರವರಿಯಲ್ಲಿ ಬೆಂಗಳೂರಿನ ಕಬ್ಬನ್ ರಸ್ತೆ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದ್ದಾಗ ಇಬ್ಬರನ್ನೂ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ 350 ಗ್ರಾಂ ತೂಕದ ಎಂಡಿಎಂಎ ಮಾದಕ ಪದಾರ್ಥ ಜಪ್ತಿ ಮಾಡಲಾಗಿತ್ತು. ಬಂಧಿತ ಒಕೋರೊ ಕ್ರಿಶ್ಚಿಯಾನ್ 2018ರಲ್ಲಿ 3 ತಿಂಗಳ ವೀಸಾ ಪಡೆದು ಭಾರತಕ್ಕೆ ಬಂದಿದ್ದ. ವೀಸಾ ಅವಧಿ ಮುಗಿದ ಬಳಿಕ ವಾಪಾಸಾಗಿರಲಿಲ್ಲ.
ಟಿ.ಸಿ.ಪಾಳ್ಯದಲ್ಲಿ ಫುಟ್‍ಬಾಲ್ ಅಕಾಡೆಮಿಯಲ್ಲಿ ಪರಿಚಯವಾದ ರೋಹಿತ್ ಕ್ರಿಸ್ಟೋಫರ್ ಜೊತೆ ಸೇರಿ ಮಾದಕ ಪದಾರ್ಥಗಳ ಮಾರಾಟ ಆರಂಭಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಬಂಧಿತರ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯ ಕಲಂ 22(ಸಿ), 27(ಎ), 27(ಬಿ), ವಿದೇಶಿಗರ ಕಾಯ್ದೆ 1946ರ (14) ರಡಿ ಪ್ರಕರಣ ದಾಖಲಿಸಿಕೊಂಡಿದ್ದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು, ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.