ಬೆಂಗಳೂರು | ಮಾದಕ ಪದಾರ್ಥಗಳ ಮಾರಾಟ: ವಿದೇಶಿ ಪ್ರಜೆಯ ಸೆರೆ, 2 ಕೋಟಿ ರೂ. ಮೌಲ್ಯದ ಮಾಲು ವಶ
ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಮಾದಕ ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿ, 2 ಕೋಟಿ ರೂ. ಮೌಲ್ಯದ 1 ಕೆ.ಜಿ. ಎಂಡಿಎಂಎ ಕ್ರಿಸ್ಟಲ್, ಮೊಬೈಲ್ ಪೋನ್, ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಕ್ರಿಸ್ಟಿನ್ ಸೊಪುರುಚುಕ್ವು ಎಂದು ಗುರುತಿಸಲಾಗಿದೆ. 2012ರಲ್ಲಿ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಈತ, ಮೋಜಿನ ಜೀವನಕ್ಕಾಗಿ ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದ. ಒಂದು ಗ್ರಾಂಗೆ 20 ಸಾವಿರ ರೂ.ನಂತೆ ಮಾರಾಟ ಮಾಡುತ್ತಿದ್ದ. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯು ನಕಲಿ ದಾಖಲೆ ಸೃಷ್ಟಿಸಿಕೊಂಡು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ವಿದೇಶಿಗರ ಪ್ರಾದೇಶಿಕ ನೋಂದಣಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.