ಬೆಂಗಳೂರು: 7ನೇ ಇನ್ನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಪ್ರಶಸ್ತಿ ಪ್ರದಾನ
ಬೆಂಗಳೂರು:7ನೇ ಇನ್ನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಐಎಫ್ಎಫ್) ವು ಶುಕ್ರವಾರ ಬೆಂಗಳೂರಿನ ಮಾರತಹಳ್ಳಿಯ ಇನ್ನೋವೇಟಿವ್ ಫಿಲ್ಮ್ ಅಕಾಡೆಮಿಯಲ್ಲಿ ಆರಂಭಗೊಂಡಿತು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಾಜಿ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು.
ಅಕ್ಟೋಬರ್ 04 ರಿಂದ 06 ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಭಾಷೆಗಳ 100ಕ್ಕೂ ಹೆಚ್ಚು ಚಲನಚಿತ್ರ ಪ್ರದರ್ಶನಗಳು, 15ಕ್ಕೂ ಹೆಚ್ಚು ದೇಶಗಳ ಕಾರ್ಯಾಗಾರಗಳು ಮತ್ತು ಮಾಸ್ಟರ್ ಕ್ಲಾಸ್ ಗಳು, ವಿಶೇಷ ಉಪನ್ಯಾಸಗಳು, ಚರ್ಚೆಗಳು, ಕಿರುಚಿತ್ರ ಸ್ಪರ್ಧೆಗಳು ನಡೆಯಲಿವೆ.
ಈ ಸಂದರ್ಭದಲ್ಲಿ ದಾದಾ ಸಾಹೇಬ್ ಫಾಲ್ಕೆ-ಎಂ ಎಸ್ ಕೆ ಟ್ರಸ್ಟ್ ನ ಸಹಯೋಗದೊಂದಿಗೆ ಇನ್ನೋವೇಟಿವ್ ಫಿಲ್ಮ್ ಅಕಾಡೆಮಿಯು ಜೀವಮಾನ ಸಾಧನೆ ಪ್ರಶಸ್ತಿ, ಅತ್ಯುತ್ತಮ ಭಾರತೀಯ ಚಿತ್ರ, ಅತ್ಯುತ್ತಮ ಕನ್ನಡ ಚಿತ್ರ, ಅತ್ಯುತ್ತಮ ತಮಿಳು ಚಿತ್ರ, ಅತ್ಯುತ್ತಮ ನಟ ಪ್ರಶಸ್ತಿ, ನಿರ್ದೇಶನದ ಶ್ರೇಷ್ಠತಾ ಪ್ರಶಸ್ತಿ, ಮಾಧ್ಯಮ ಮತ್ತು ಮನರಂಜನೆಯ ಶ್ರೇಷ್ಠತಾ ಪ್ರಶಸ್ತಿಗಳನ್ನು ಪ್ರದಾನ ಮಾಡಿತು. ಖ್ಯಾತ ನಟಿ ಮಾಲಾಶ್ರೀ, ನಟ ಗಣೇಶ್ ಮತ್ತು ನಟ ತೇಜ ಸಜ್ಜ ಸೇರಿದಂತೆ ಹಲವರು ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಜಯ್ ಜಾಜು ಅವರು, ಸೃಜನಶೀಲ ಚಲನಚಿತ್ರ ತಯಾರಕರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತಿರುವ ಇನ್ನೋವೇಟಿವ್ ಫಿಲ್ಮ್ ಅಕಾಡೆಮಿಯನ್ನು ಶ್ಲಾಘಿಸಿದರು.
ಬೆಂಗಳೂರಿನಲ್ಲಿರುವ ಎವಿಜಿಸಿ ಶ್ರೇಷ್ಠತಾ ಕೇಂದ್ರಕ್ಕೆ ಭೇಟಿ ನೀಡಿದ ಸಂಜಯ್ ಜಾಜು ಅವರು ಮುಂಬರುವ ವೇವ್ಸ್ (ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ) ಹಿನ್ನೆಲೆಯಲ್ಲಿ ಉದ್ಯಮ ತಜ್ಞರು ಮತ್ತು ಎಬಿಎಐ ಜೊತೆ ದುಂಡುಮೇಜಿನ ಚರ್ಚೆಯಲ್ಲಿ ಭಾಗವಹಿಸಿದರು.
ಪ್ರಸ್ತುತ ಶೃಂಗಸಭೆಯು ನವೆಂಬರ್ 20 ರಿಂದ 24, 2024 ರವರೆಗೆ ಗೋವಾದಲ್ಲಿ ನಡೆಯಲಿದೆ.