ಸುದ್ದಗುಂಟೆಪಾಳ್ಯ ಯುವತಿಗೆ ಕಿರುಕುಳ ಪ್ರಕರಣ; ಕೇರಳದಲ್ಲಿ ಆರೋಪಿ ಸೆರೆ
ಆರೋಪಿಯ ಪತ್ತೆಗೆ 700ಕ್ಕೂ ಅಧಿಕ ಸಿಸಿಟಿವಿ ಪರಿಶೀಲಿಸಿದ್ದ ಪೊಲೀಸರು
ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ರಸ್ತೆಯಲ್ಲಿ ಸಾಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಡಿ ಆರೋಪಿಯನ್ನು ನಗರದ ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಕೇರಳದಲ್ಲಿ ಬಂಧಿಸಿರುವುದಾಗಿ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಸಂತೋಷ್ ಎಂಬಾತನನ್ನು ಬಂಧನ ಮಾಡಲಾಗಿದ್ದು, ಬೆಂಗಳೂರಿಗೆ ಕರೆತರಲಾಗಿದೆ. ಈತ ಬೆಂಗಳೂರಿನ ತಿಲಕನಗರದ ಗುಲ್ಬರ್ಗಾ ಕಾಲೋನಿಯ ನಿವಾಸಿಯಾಗಿದ್ದು, ವೈಟ್ಫೀಲ್ಡ್ ವ್ಯಾಪ್ತಿಯ ಕಾರು ಶೋರೂಮ್ವೊಂದರಲ್ಲಿ ಕಾರು ಚಾಲಕನಾಗಿದ್ದ. ಕೃತ್ಯವೆಸಗಿರುವುದು ತಾನೇ ಎಂದು ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದಾನೆ ಎಂದರು.
ಪ್ರಕರಣದ ಹಿನ್ನೆಲೆ: ಎಪ್ರಿಲ್ 3ರಂದು ಮುಂಜಾನೆ 1.55ರ ಸುಮಾರಿಗೆ ಇಬ್ಬರು ಯುವತಿಯರು ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್ನ 1ನೇ ಕ್ರಾಸ್ನಲ್ಲಿ ಸಾಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಏಕಾಏಕಿ ಓರ್ವ ಯುವತಿಯನ್ನು ಹಿಡಿದುಕೊಂಡು ಗೋಡೆಗೆ ಒರಗಿಸಿ ಲೈಂಗಿಕ ಕಿರುಕುಳ ನೀಡಿದ್ದ. ಈ ವೇಳೆ ಯುವತಿಯರು ಜೋರಾಗಿ ಕಿರುಚಿಕೊಂಡ ಪರಿಣಾಮ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿಯ ವಿಕೃತಿ ಘಟನಾ ಸ್ಥಳದ ಪಕ್ಕದಲ್ಲಿದ್ದ ಕಟ್ಟಡವೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಕಿರುಕುಳ ಅನುಭವಿಸಿದ ಯುವತಿ ಘಟನೆ ಸಂಬಂಧ ಯಾವುದೇ ದೂರು ನೀಡಿರಲಿಲ್ಲ. ಆದರೆ, ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನನ್ವಯ ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪೊಲೀಸರ ತಂಡ ಆರೋಪಿಯ ಪತ್ತೆಗಾಗಿ ಸುಮಾರು 700ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಜಾಲಾಡಿತ್ತು.