ಬೆಂಗಳೂರು : ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆಸಿದರೆ ಕಾನೂನು ಕ್ರಮ
ಬೆಂಗಳೂರು: ಬೆಂಗಳೂರು ಜಲಮಂಡಳಿ ಜಾಲತಾಣದಲ್ಲಿ ಕೊಳವೆಬಾವಿ ಕೊರೆಸಲು ಅನುಮತಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಮಾ.15ರ ನಂತರ ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಲಮಂಡಳಿಯ ಅಧ್ಯಕ್ಷರು ಆದೇಶದಲ್ಲಿ ತಿಳಿಸಿದ್ದಾರೆ
ನಗರದಲ್ಲಿ ಮಳೆನೀರಿನ ಕೊರತೆಯಿಂದಾಗಿ ಮತ್ತು ಆವೈಜ್ಞಾನಿಕವಾಗಿ ಕೊಳವೆ ಬಾವಿಗಳನ್ನು ಕೊರೆಯುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬಾವಿ ಕೊರೆಯುವ ಮುನ್ನ ಜಲಮಂಡಳಿಯ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಒಂದು ವೇಳೆ ಅನುಮತಿ ಪಡೆಯದೇ ಇರುವ ಸ್ಥಳಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದಲ್ಲಿ ಅಂತಹ ಕೊಳವೆಬಾವಿ ಕೊರೆಯುವರ ವಿರುದ್ಧ ದೂರು ದಾಖಲಿಸಲಾಗುತ್ತದೆ. ನಿಯಮಾನುಸಾರ ರಿಗ್ ಪಡೆಯಲು ನೀಡಿರುವ ಅನುಮತಿಯನ್ನೂ ಕೂಡಲೇ ರದ್ದುಪಡಿಸಲಾಗುತ್ತದೆ.
ಕೊಳವೆ ಬಾವಿ ಕೊರೆಯಲು ಅನುಮತಿ ಕೇಳಿದಲ್ಲಿ ಸಾರ್ವಜನಿಕ ಕೊಳವೆ ಬಾವಿಗಳಿಗೆ ಪ್ರಥಮ ಆಧ್ಯತೆ ನೀಡಲಾಗುವುದು. ಖಾಸಗಿ ಕೊಳವೆಬಾವಿಗಳಿಗೆ ಅಂತರ್ಜಲ ಮಟ್ಟ, ಅವಶ್ಯಕತೆ ಹಾಗೂ ತಜ್ಞರ ವರದಿ ಆಧಾರಿಸಿ ಸಂಬಂಧಪಟ್ಟವರಿಂದ ಸ್ಥಳ ಪರಿಶೀಲಿಸಿ ನಂತರ ನಿಯಮಾನುಸಾರ ಸೂಕ್ತ ಪ್ರಾಧಿಕಾರದಿಂದ ಅನುಮತಿ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.