ಪರ ಭಾಷಿಕರಿಗೆ ಕನ್ನಡ ಕಲಿಸಲು ಮುಂದಾದ ಬೆಂಗಳೂರು ಪೊಲೀಸರು : ‘ಲರ್ನ್ ಕನ್ನಡ ವಿತ್ ಆಟೋ ಕನ್ನಡಿಗ' ವಿನೂತನ ಅಭಿಯಾನ ಪ್ರಾರಂಭ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪರ ಭಾಷಿಕರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಆಟೋ ಚಾಲಕರಿಗೆ ಕನ್ನಡ/ಇಂಗ್ಲಿಷ್‌ನಲ್ಲಿರುವ ಕೆಲ ಸರಳ ವಾಕ್ಯಗಳನ್ನೊಳಗೊಂಡ ಕಾರ್ಡ್‌ಳನ್ನು ಬೆಂಗಳೂರು ನಗರ ಪೊಲೀಸರು ಹಂಚಿಕೆ ಮಾಡಿದ್ದಾರೆ.
ಲ್ಯಾಮಿನೇಟೆಡ್ ಕಾರ್ಡ್‌ಗಳಲ್ಲಿ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಸಂವಹನವನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾದ ವಾಕ್ಯಗಳು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಲಾಗಿದೆ. ‘ಲರ್ನ್ ಕನ್ನಡ ವಿತ್ ಆಟೋ ಕನ್ನಡಿಗ' ಎಂಬ ವಿಶಿಷ್ಟ ಪರಿಕಲ್ಪನೆ ಮೂಲಕ ಪರ ಭಾಷಿಗರಿಗೆ ಕೆಲವೊಂದು ಸರಳ ಕನ್ನಡ ಪದಗಳನ್ನು ಕಲಿಸುವಂತಹ ಪ್ರಯತ್ನ ಇದಾಗಿದೆ.
ಆಟೋದಲ್ಲಿ ಮಾತನಾಡುವಂತಹ ಕೆಲವೊಂದು ಸರಳ ಪದಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಪ್ರಿಂಟ್ ಮಾಡಿಸಿ ತಮ್ಮ ಆಟೋದಲ್ಲಿ ಅಂಟಿಸಿದ್ದಾರೆ.
ಪ್ರತಿ ಕಾರ್ಡ್ ಲ್ಲಿ ಕ್ಯೂಆರ್ ಕೋಡ್ ಸಹ ಇದ್ದು, ಸ್ಕ್ಯಾನ್ ಮಾಡಿದರೆ ಕನ್ನಡ ಬಳಕೆಯ ಕುರಿತ ವಿಡಿಯೋ ಪ್ಲೇ ಆಗಲಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸುವ ಸಣ್ಣ ಪ್ರಯತ್ನವಾಗಿದ್ದು, ಈ ತಿಂಗಳಿನಿದ ಈ ಅಭಿಯಾನ ಮುಂದುವರೆಯಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಇತ್ತೀಚಿಗೆ ಅಜ್ಮಲ್ ಸುಲ್ತಾನ್ ಎಂಬ ಬೆಂಗಳೂರಿನ ಆಟೋ ಚಾಲಕ ಆರಂಭಿಸಿದ್ದ ಇದೇ ರೀತಿಯ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು. ಅದರಿಂದ ಪ್ರೇರಣೆ ಪಡೆದಿರುವ ಪೊಲೀಸರು, ನಗರದ ಆಟೋ ಚಾಲಕರಿಗೆ ಕಾರ್ಡ್ ಹಂಚಿದ್ದಾರೆ.