ಬೆಂಗಳೂರು: ಹೊಸ ವರ್ಷಾಚರಣೆಗೆ ಸರಬರಾಜು ಆಗುತ್ತಿದ್ದ 318 ಕೆಜಿ ಗಾಂಜಾ ಜಪ್ತಿ!
Photo credit:X/@BlrCityPolice
ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಬರೋಬ್ಬರಿ 3.25 ಕೋಟಿ ರೂ.ಮೌಲ್ಯದ 318 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ನಗರ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಕೇರಳ ಮೂಲದ ಅಚ್ಚು, ಬೆಂಗಳೂರು ಮೂಲದ ಝಮೀರ್ ಹಾಗೂ ಆತನ ಪತ್ನಿ ರೇಷ್ಮಾ ಎಂಬವರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಲಾಗಿದೆ ಎಂದರು.
ಒಡಿಶಾ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳಿಂದ ಗಾಂಜಾ ಖರೀದಿಸಿ ಕಾರಿನ ಮೂಲಕ ಬೆಂಗಳೂರಿಗೆ ತರಲಾಗುತ್ತಿತ್ತು. ಪ್ರಮುಖ ಆರೋಪಿಯಾಗಿರುವ ಅಚ್ಚು ವಿರುದ್ಧ ಕೇರಳದ ವಿವಿಧ ಠಾಣೆಗಳಲ್ಲಿ ಮಾದಕ ವಸ್ತು ಸರಬರಾಜು, ಹತ್ಯೆ ಯತ್ನ ಮಾತ್ರವಲ್ಲದೇ ಮೂರು ಬಾರಿ ಗೂಂಡಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು ಎಂದು ವಿವರಿಸಿದರು.
ಕೆಲದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿ, ಇಲ್ಲಿನ ಸ್ಥಳೀಯ ಕಾರು ಚಾಲಕನಾಗಿದ್ದ ಝಮೀರ್ ನನ್ನು ಪರಿಚಯಿಸಿಕೊಂಡಿದ್ದ. ನಂತರ ಝಮೀರ್ ಹಾಗೂ ಆತನ ಪತ್ನಿಯನ್ನು ಪುಸಲಾಯಿಸಿ ಗಾಂಜಾ ಮಾರಾಟದ ಕೃತ್ಯಕ್ಕೆ ಬಳಸಿಕೊಂಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಹೇಳಿದರು.