ಬೆಂಗಳೂರಿನಲ್ಲಿ ಮುಂದುವರೆದ ಮಳೆ, ಅವಾಂತರ ಸೃಷ್ಟಿ
ಬೆಂಗಳೂರು : ಬೇಸಿಗೆ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರದಲ್ಲಿ ಬುಧವಾರದಂದು ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆಯಾಗಿದೆ. ಒಂದೇ ವಾರದಲ್ಲಿ ನಾಲ್ಕು ದಿನ ಮಳೆಯಾಗಿದ್ದು, ಬುಧವಾರ ಸುರಿದ ಮಳೆಗೆ ನಗರದಲ್ಲಿ ಅವಾಂತರ ಸೃಷ್ಟಿಯಾಗಿದೆ.
ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಜಯನಗರ, ಜೆಜೆಆರ್ ನಗರ, ಟೌನ್ ಹಾಲ್ ಸುತ್ತ ಮುತ್ತ ಭಾರೀ ಮಳೆ ಬಿದ್ದಿದೆ. ಸದಾಶಿವ ನಗರ, ಪ್ಯಾಲೇಸ್ ಗುಟ್ಟಹಳ್ಳಿ, ಮಲ್ಲೇಶ್ವರ, ವೈಯಾಲಿಕಾವಲ್, ಅರಮನೆ ಮೈದಾನ, ಶೇಷಾದ್ರಿಪುರ, ಯಶವಂತಪುರ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ವಿಧಾನಸೌಧ, ಕೆ.ಆರ್. ಸರ್ಕಲ್, ಕಾರ್ಪೊರೇಷನ್, ಟೌನ್ ಹಾಲ್ ಸುತ್ತಮುತ್ತ ಗುಡುಗು, ಮಿಂಚು ಸಹಿತ ಜೋರು ಮಳೆ ಬಿದ್ದಿದೆ.
ನಗರದ ಹಲವು ಕಡೆ ಮರಗಳು ಧರೆಗುರುಳಿವೆ. ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನೂ ಕೆಲವು ಕಡೆ ವಾಹನ ದಟ್ಟಣೆ ಉಂಟಾಗಿತ್ತು. ಸಂಜೆ ಅಫೀಸ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಜನರು ಮಳೆಯಲ್ಲಿ ಸಿಲುಕಿ ಒದ್ದಾಡಿದರು. ಕೆಲವರು ಅಲ್ಲಲ್ಲಿ ಅಂಗಡಿಗಳ ಮುಂದೆ ನಿಂತು ಮಳೆಯಿಂದ ರಕ್ಷಣೆ ಪಡೆದರು.
ವಸಂತನಗರದಲ್ಲಿ ಮಳೆಗೆ ಆಟೋ ಮೇಲೆ ಮರದ ಜೊತೆಗೆ ವಿದ್ಯುತ್ ಕಂಬ ಬಿದ್ದು, ಆಟೋ ಮುಂಭಾಗದ ಫುಲ್ ಜಖಂ ಆಗಿದೆ. ಅದೃಷ್ಟವಶಾತ್ ಡ್ರೈವರ್ ಪಾರಾಗಿದ್ದಾರೆ. ಚಿಕ್ಕ ಪುಟ್ಟ ಗಾಯಗಳಾಗಿವೆ. ಗಾಳಿ ಸಹಿತ ಸುರಿದ ಜೋರು ಮಳೆಗೆ ವಿದ್ಯುತ್ ಕಂಬ ಜೊತೆಗೆ ಮರ ಬಿದ್ದಿದೆ.