ಬೆಂಗಳೂರಿನಲ್ಲಿ ರವಿವಾರ ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಬಂಗಾಳಕೊಲ್ಲಿಯ ಮತ್ತು ಅರಬ್ಬೀ ಸುಮುದ್ರದಲ್ಲಿ ಉಂಟಾಗಿದ್ದ ಚಂಡಮಾರುತದ ಕಾರಣ ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ರವಿವಾರ ರಾತ್ರಿಯಿಂದ ಸೋಮವಾರ ಮುಂಜಾನೆಯವರೆಗೆ ಮಳೆ ಸುರಿದಿದೆ. ಪರಿಣಾಮವಾಗಿ ಕೆಲ ಭಾಗದಲ್ಲಿ ಅವಾಂತರ ಸೃಷ್ಟಿಯಾಗಿದೆ. ನಗರದ ಎಲ್ಲ ಶಾಲೆಗಳಿಗೆ ತುರ್ತು ರಜೆಯನ್ನು ಘೋಷಣೆ ಮಾಡಲಾಗಿತ್ತು.
ಮಳೆಯಿಂದಾಗಿ ನಗರದ ಕೆಲ ಬಡಾವಣೆಗಳಲ್ಲಿ ಜಲಾವೃತವಾಗಿದ್ದು, ವಾಹನಗಳು ಮುಳುಗಡೆಯಾಗಿವೆ. ರಸ್ತೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನಿವಾಸಿಗಳು ಮನೆಯಲ್ಲೇ ಬಂಧಿತರಾಗಿದ್ದರು. ಆಲಾವೃತವಾಗಿರುವ ರಸ್ತೆಯಲ್ಲೇ ಬೈಕ್, ಆಟೋ ತಳ್ಳಿಕೊಂಡು ಸಾಗುತ್ತಿರುವ ಸವಾರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಮಳೆ ಅವಾಂತರದಿಂದಾಗಿ ಶಾಲೆಗೆ ಜಲದಿಗ್ಬಂಧನ ಉಂಟಾಗಿತ್ತು. 10ಕ್ಕೂ ಹೆಚ್ಚು ಬಸ್‍ಗಳು ಮುಳುಗಡೆಯಾದವು. ಮಳೆಯಿಂದಾಗಿ ಖಾಸಗಿ ಶಾಲೆ ಸೇರಿದಂತೆ ಸುತ್ತ ಮುತ್ತ ಕೆರೆಯಂತಾಗಿತ್ತು. ಶಾಲೆ ಹೊರಗೆ ನಿಂತಿರುವ ಬಸ್‍ಗಳು ನೀರುಪಾಲಾಗಿದ್ದವು.
ಜೆಜೆ ನಗರದ ವಿಎಸ್ ಗಾರ್ಡನ್‍ನಲ್ಲಿಯೂ ಮನೆಗಳಿಗೆ ನೀರು ನುಗ್ಗಿತು. ಕೊಳಚೆ ನೀರು ಹೊರಹಾಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೋರಮಂಗಲದಲ್ಲಿ ಮುಖ್ಯರಸ್ತೆಗಳೇ ಹಳ್ಳ, ಕೊಳ್ಳಗಳಾಗಿವೆ. ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.
ಕೋರಮಂಗಲದಲ್ಲಿ ಮುಖ್ಯರಸ್ತೆಗಳೇ ಹಳ್ಳ, ಕೊಳ್ಳಗಳಾಗಿವೆ. ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಭಾರಿ ಮಳೆಗೆ ಸರ್ಜಾಪುರ-ದೊಮ್ಮಸಂದ್ರ ರಸ್ತೆ ಜಲಾವೃತಗೊಂಡಿತು. ದೊಮ್ಮಸಂದ್ರ ಸರ್ಕಲ್ ಬಳಿ ರಸ್ತೆ ಕೆರೆಯಂತಾಯಿತು. ಇದರಿಂದ ಕಿಲೋ ಮೀಟರ್‍ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಕೆಂಗೇರಿ, ಆರ್‍ಆರ್ ನಗರ, ದಾಸರಹಳ್ಳಿ ಭಾಗದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು. ಅದೇ ರೀತಿ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲೂ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಇಲ್ಲಿನ ಜನ ಜಲ ದಿಗ್ಬಂಧನದಲ್ಲಿದ್ದರು. ಇಡೀ ರಸ್ತೆ ನೀರಿನಿಂದ ತುಂಬಿರುವ ಕಾರಣ ಇದೇ ರಸ್ತೆಯಲ್ಲಿರೋ ಮನೆಗಳಿಗೆ ಹೋಗುವವರು, ಬರುವವರು ಬೇರೆ ಪರ್ಯಾಯ ಮಾರ್ಗವಿಲ್ಲದೇ ಕೊಳಚೆ ನೀರಿನಲ್ಲೇ ಓಡಾಡಿದರು.
ಇಲ್ಲಿನ ಗಾಳಿ ಆಂಜನೇಯ ದೇವಾಲಯದ ಆವರಣಕ್ಕೂ ಮಳೆ ನೀರು ರಾಜಕಾಲುವೆ ನೀರು ಹರಿದು ಬರುತ್ತಿತ್ತು. ರವಿವಾರ ರಾತ್ರಿಯಿಂದ ಸುರಿದ ಮಳೆಗೂ ದೇವಾಲಯ ಹೊರ ಭಾಗ ಜಲವೃತವಾಗಿದ್ದು, ಮಳೆ ನಿಂತರೂ ದೇವಾಲಯದ ಹೊರ ಭಾಗದ ಮುಖ್ಯ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೂ ಸಮಸ್ಯೆ ಆಗುತ್ತಿದೆ.
ಓಕಳಿಪುರಂ ಅಂಡರ್ ಪಾಸ್ ಕೆರೆಯಂತೆ ಆಗಿದ್ದು, ಎರಡು ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಿದರು. ಜೆಜೆ ಆರ್ ನಗರದ ವಿಎಸ್ ಗಾರ್ಡನ್‍ನಲ್ಲಿ ಮೋರಿ ತಡೆಗೋಡೆ ಕುಸಿತಗೊಂಡು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮುಂಜಾನೆಯಿಂದಲೂ ಸುರಿಯುತ್ತಿರುವ ಮಳೆ ಹಿನ್ನೆಲೆ ಸರ್ಜಾಪುರ ಆರ್‍ಜಿಬಿ ಟೆಕ್ ಪಾರ್ಕ್ ಎದುರು ಜಲಾವೃತಗೊಂಡಿತು.
ಬೆಳ್ಳಂದೂರು ಕೆರೆ ಪಕ್ಕದಲ್ಲಿರೋ ಸಕ್ರ ಆಸ್ಪತ್ರೆಯ ರಸ್ತೆ ಕೆರೆಯಂತಾಗಿತ್ತು. ಇಡೀ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ವಿಲ್ಸನ್ ಗಾರ್ಡನ್ ಬಿಟಿಎಸ್ ಮುಖ್ಯ ರಸ್ತೆ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಲ್ಯಾವಲಿ ರೋಡ್ ಹುಲ್‍ಕುಲ್ ರೆಸಿಡೆನ್ಸಿ 36 ಫ್ಲಾಟ್ ಇರುವ ಅಪಾರ್ಟ್ಮೆಂಟ್ ಕೆಳಭಾಗ ಸಂಪೂರ್ಣ ನೀರು ತುಂಬಿತ್ತು.
ನಾಗದೇನಹಳ್ಳಿಯಲ್ಲಿ ಮುಂದುವರೆದ ಮಳೆಯಿಂದ ಕೆರೆ ನೀರು ಹಳ್ಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹೆಬ್ಬಾಳ ಸುತ್ತಮುತ್ತ ಸಂಚಾರ ದಟ್ಟಣೆಯಾಗಿತ್ತು. ಕೆಲಸ ಕಾರ್ಯಕ್ಕೆ ಹೋಗುವ ವಾಹನ ಸವಾರರು ವಾಹನ ದಟ್ಟಣೆಯಲ್ಲಿ ಸಿಕ್ಕಿಕೊಂಡಿದ್ದರು. ಬನ್ನೇರುಘಟ್ಟ ರಸ್ತೆಯ ವಿಜಯಶ್ರೀ ಲೇಔಟ್ ಹಾಗೂ ಹುಳಿಮಾವು ಮೆಟ್ರೋ ಸ್ಟೇಷನ್ ಬಳಿಯ ರಸ್ತೆಗಳು ಜಲಾವೃತವಾಗಿದೆ.