ಬೆಂಗಳೂರಿನಲ್ಲಿ ಭಾರೀ ಮಳೆ: ಹಲವೆಡೆ ಟ್ರಾಫಿಕ್ ಜಾಮ್, ಜನಜೀವನ ಅಸ್ತವ್ಯಸ್ಥ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರವಿವಾರ ಹಾಗೂ ಸೋಮವಾರ ಸಂಜೆ ನಂತರ ತಡರಾತ್ರಿಯವರೆಗೆ ಭಾರೀ ಮಳೆ ಸುರಿದಿದೆ. ಇದರಿಂದಾಗಿ, ಎರಡು ದಿನವೂ ಹಲವೆಡೆ ಟ್ರಾಫಿಕ್ ಜಾಮ್‍ವುಂಟಾಯಿತು ಹಾಗೂ ಜನಜೀವನ ಅಸ್ತವ್ಯಸ್ಥಗೊಂಡಿತು.
ಧಾರಾಕಾರ ಮಳೆಗೆ ನಗರದ ಹಲವು ರಸ್ತೆ, ತಗ್ಗುಪ್ರದೇಶದ ಅಂಗಡಿ, ಮನೆಗಳಿಗೆ ನೀರು ನುಗ್ಗಿದೆ. ಟ್ರಾಫಿಕ್ ಜಾಮ್‍ವುಂಟಾಯಿತು ಹಾಗೂ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಬೆಂಗಳೂರಿನ ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್, ಜಯನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಮೈಸೂರು ಬ್ಯಾಂಕ್ ಸರ್ಕಲ್, ಕೋರಮಂಗಲ, ಎಚ್‍ಎಸ್‍ಆರ್ ಲೇಔಟ್, ಕಾರ್ಪೋರೇಷನ್ ಸರ್ಕಲ್‍ನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಇನ್ನು ನಗರದ ಹೊರಭಾಗಗಳಾದ ಕೆಂಗೇರಿ, ವೈಟ್‍ಫೀಲ್ಡ್, ಕೆಆರ್ ಪುರಂ, ಅತ್ತಿಬೆಲೆ, ಆನೆಕಲ್ಲು, ಬನ್ನೇರುಘಟ್ಟ ಭಾಗಗಳಲ್ಲಿಯೂ ಭಾರೀ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಸೋಮವಾರ ಸಂಜೆ ಬಳಿಕ ಭಾರೀ ಮಳೆ ಸುರಿದಿದ್ದರಿಂದ ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಹೋಗುವವರಿಗೆ ಬಹಳಷ್ಟು ತೊಂದರೆವುಂಟಾಯಿತು. ಅಲ್ಲದೆ, ರೋಗಿಗಳನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಗಳು ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿಕೊಂಡಿದ್ದು, ಅಲ್ಲಲ್ಲಿ ಕಂಡು ಬಂದಿತು.
ಕಳೆದ ಒಂದು ವಾರದಿಂದ ಉಷ್ಣಾಂಶ ಹೆಚ್ಚಳವಾಗಿ ಬೆಂಗಳೂರು ಜನ ಬೇಸಿಗೆಯ ಅನುಭವದಲ್ಲಿದ್ದರು. ಸೆಕೆ ಹೆಚ್ಚಳವಾಗಿ ಯಾವಾಗ ಮಳೆ ಬರುತ್ತೋ ಎಂದು ಎದುರು ನೋಡುತ್ತಿದ್ದರು. ರವಿವಾರ ಹಾಗೂ ಸೋಮವಾರ ಸಂಜೆ ನಂತರ ಭಾರೀ ಮಳೆ ಸುರಿದಿದ್ದು, ತಣ್ಣನೆಯ ವಾತಾವರಣ ಕಂಡು ಬಂದಿತು.