ಬೆಂಗಳೂರು: ಅಪ್ರಾಪ್ತೆಯನ್ನು ಅಪಹರಿಸಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಬೆಂಗಳೂರು: ಅಪ್ರಾಪ್ತೆಯನ್ನು ಎರಡು ಬಾರಿ ಪ್ರೀತಿಸುವ ನಾಟಕವಾಡಿ ಅಪಹರಿಸಿ ಮದುವೆಯಾಗಿದ್ದ 22 ವರ್ಷದ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 41 ಸಾವಿರ ದಂಡ ವಿಧಿಸಿ ನಗರದ ಫೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಇಶ್ರತ್ ಜಹಾನ್ ಅರಾ, ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದೆ. ಜೊತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ 3 ಲಕ್ಷ ಹಣವನ್ನ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ನಿರ್ದೇಶಿಸಿದ್ದಾರೆ.
ಆಂಧ್ರದ ಚಿತ್ತೂರು ಮೂಲದ ಅಪರಾಧಿ, 2021ರಲ್ಲಿ ಕೋಣನಕುಂಟೆಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಾಲಕಿಯನ್ನ ಪರಿಚಯಿಸಿಕೊಂಡು ಆಕೆಯನ್ನ ಪುಸಲಾಯಿಸಿದ್ದ. ವಿವಿಧ ಆಮಿಷವೊಡ್ಡಿ ಅಪಹರಿಸಿ ಆಂಧ್ರಕ್ಕೆ ಕರೆದೊಯ್ದಿದ್ದ. ಈ ಸಂಬಂಧ ಆಕೆಯ ಪೋಷಕರು ಬಾಲಕಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಸಿ.ಕೆ.ಅಚ್ಚುಕಟ್ಟು ಠಾಣೆಯ ಅಂದಿನ ಸಬ್ ಇನ್ಸ್ ಪೆಕ್ಟರ್ ಮನೋಜ್ ನೇತೃತ್ವದ ತಂಡ ಶೋಧ ನಡೆಸಿ ಆತನನ್ನ ಬಂಧಿಸಿ ಬಾಲಕಿಯನ್ನ ರಕ್ಷಿಸಿದ್ದರು. ಕೆಲ ತಿಂಗಳ ಬಳಿಕ ಜಾಮೀನು ಪಡೆದು ಹೊರಬಂದ ಅಪರಾಧಿ ವೆಂಕಟೇಶ್, ಮತ್ತೆ ಅದೇ ಬಾಲಕಿಯನ್ನ ಭೇಟಿ ಮಾಡಿ ತನ್ನೊಂದಿಗೆ ಬರುವಂತೆ ಬಲವಂತ ಮಾಡಿದ್ದ. ಬರದಿದ್ದರೆ ಪೋಷಕರನ್ನ ಕೊಲ್ಲುವುದಾಗಿ ಬೆದರಿಸಿ ಅಪಹರಿಸಿ ಆಂಧ್ರಕ್ಕೆ ಕರೆದೊಯ್ದು ಮದುವೆಯಾಗಿದ್ದ. ಎರಡನೇ ಬಾರಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಸಿ.ಕೆ.ಅಚ್ಚುಕಟ್ಟು ಪೊಲೀಸರು ತನಿಖೆ ನಡೆಸಿ ಎರಡನೇ ಬಾರಿ ಬಂಧಿಸಿ ನಗರಕ್ಕೆ ಕರೆ ತಂದಿದ್ದರು.
ವಿಚಾರಣೆ ವೇಳೆ ಅತ್ಯಾಚಾರವೆಸಗಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಫೋಕ್ಸೋ ವಿಶೇಷ ನ್ಯಾಯಾಲಯ ಅಪರಾಧಿಗೆ 20 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.