ಬೆಂಗಳೂರು: ವಿಮಾನ ನಿಲ್ದಾಣದಲ್ಲಿ ದಾಖಲೆ ಇಲ್ಲದೆ ಅಡಿಕೆ ಸಾಗಾಣೆ: 460 ಬ್ಯಾಗ್ಗಳ ವಶ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಇಲ್ಲಿನ ದೇವನಹಳ್ಳಿಯ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗತ್ಯ ದಾಖಲೆಗಳಿಲ್ಲದ 11,500 ಕೆ.ಜಿ.ಗಳಷ್ಟು ಅಡಿಕೆಯ 460 ಬ್ಯಾಗ್ಗಳನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿರುವುದು ವರದಿಯಾಗಿದೆ.
ಅಸ್ಸಾಂ ಮತ್ತು ಮಣಿಪುರದಿಂದ ಮಧ್ಯಪ್ರದೇಶ ಹಾಗೂ ಬೆಂಗಳೂರಿಗೆ ಯಾವುದೇ ಅಧಿಕೃತ ದಾಖಲೆಗಳು ಇಲ್ಲದೆ ಅಡಿಕೆಯನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ತನಿಖೆ ಕೈಗೊಂಡು ಮಾಲು ವಶಕ್ಕೆ ಪಡೆದು ಕ್ರಮ ಜರುಗಿಸಿದ್ದಾರೆ.
ಏರ್ ವೇ ಬಿಲ್ ಗಳಲ್ಲಿ ಬರೀ ವ್ಯಕ್ತಿಗಳ ಹೆಸರುಗಳು ಮತ್ತು ಮೊಬೈಲ್ ನಂಬರ್ ಗಳನ್ನು ಉಪಯೋಗಿಸಿಕೊಂಡು ಸರಕುಗಳನ್ನು ರವಾನಿಸಲಾಗುತ್ತಿತ್ತು.
ಪ್ರಕರಣದಲ್ಲಿ ತೆರಿಗೆ ವಂಚಕರು ತಮ್ಮನ್ನು ರೈತರೆಂದು ಪ್ರತಿಬಿಂಬಿಸಿಕೊಂಡು ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ. ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಆಧರಿಸಿ ಈ ಪ್ರಕರಣದ ಸತ್ಯವನ್ನು ಹೊರಗೆಳೆಯಲಾಗಿದ್ದು, ತೆರಿಗೆ ವಂಚಕರು ತಮ್ಮ ತಪ್ಪನ್ನು ಒಪ್ಪಿಕೊಂಡು 24.26ಲಕ್ಷ ರೂ. ದಂಡವನ್ನು ಪಾವತಿಸಿದ್ದಾರೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.