ಭದ್ರಾ ಮೇಲ್ದಂಡೆ ಯೋಜನೆ | ಕೇಂದ್ರದಿಂದ 5,300 ಕೋಟಿ ರೂ.ಅನುದಾನ ಬರಬೇಕು : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5,300 ಕೋಟಿ ರೂ. ಅನುದಾನ ಬರಬೇಕಿತ್ತು. ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಬಜೆಟ್ ನಲ್ಲಿ ಮಾತು ಕೊಟ್ಟರೂ ಹಣ ನೀಡಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಪರಿಷತ್ತಿನಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯಲ್ಲಿ ಈಗಾಗಲೇ 1.25 ಲಕ್ಷ ಕೋಟಿಯಷ್ಟು ಕಾಮಗಾರಿಗಳು ನಡೆಯುತ್ತಿವೆ. ಈಗ ನಡೆಯುತ್ತಿರುವ ಕಾಮಗಾರಿಗಳ ಗುತ್ತಿಗೆದಾರರಿಗೆ ಶೇ.10ರಿಂದ ಶೇ.15 ಬಿಲ್ ಪಾವತಿ ಮಾಡುವ ಪರಿಸ್ಥಿತಿ ಇದೆ ಎಂದರು.
ನವಲಿ ಜಲಾಶಯದ ಯೋಜನೆ ಬಗ್ಗೆ ನಾವು ಗಮನ ಹರಿಸುತ್ತಿದ್ದು, ಚುನಾವಣೆ ಮುಗಿದ ನಂತರ ಎರಡೂ ರಾಜ್ಯಗಳ ಜತೆ ಚರ್ಚೆ ಮಾಡುತ್ತೇವೆ. ಈ ಯೋಜನೆಗೂ ಹಣ ಮೀಸಲಿಡುತ್ತಿದ್ದೇವೆ. ಈ ಭಾಗದಲ್ಲಿರುವ ಖನಿಜ ಅನುದಾನವನ್ನು ನೀರಾವರಿ ಯೋಜನೆಗಳಿಗೆ ನೀಡುವ ಬಗ್ಗೆ ಸಮಿತಿ ಮುಂದೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ. ಅವರು ಒಪ್ಪಿದರೆ ಈ ಸಮಸ್ಯೆಗಳು ಬಗೆಹರಿಯಲಿವೆ ಎಂದು ಮಾಹಿತಿ ನೀಡಿದರು.