‘ಜಾತಿ ಗಣತಿ’ ವಿಚಾರದಲ್ಲಿ ರಾಜಕೀಯ ಗೊಂದಲ ಸೃಷ್ಟಿ ಬೇಡ : ಭೋಸರಾಜು
"ಸರಕಾರ ಎಲ್ಲಾ ಜಾತಿ, ಸಮುದಾಯಗಳ ಹಿತರಕ್ಷಣೆಗೆ ಬದ್ಧ"

ಎನ್.ಎಸ್.ಭೋಸರಾಜು
ಬೆಂಗಳೂರು : ಜಾತಿ ಗಣತಿ ವಿಚಾರದಲ್ಲಿ ರಾಜಕೀಯ ಗೊಂದಲ ಸೃಷ್ಟಿ ಮಾಡುವುದು ಬೇಡ. ಸರಕಾರ ಎಲ್ಲಾ ಜಾತಿ, ಸಮುದಾಯಗಳ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಅನೇಕ ಸಣ್ಣ ಸಣ್ಣ ಸಮುದಾಯಗಳಿವೆ. ಅವರನ್ನು ಯಾರು ಕೇಳುವವರೇ ಇಲ್ಲ. ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಹಲವಾರು ಸಮಿತಿಗಳು, ಆಯೋಗಗಳು ಬಂದು ಹೋಗಿವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನೆಲ್ಲ ಗಮದಲ್ಲಿಟ್ಟುಕೊಂಡು ಅವರ ಹಿಂದಿನ ಸರಕಾರದ ಅವಧಿಯಲ್ಲಿ 165 ಕೋಟಿ ರೂ.ಗಳನ್ನು ಖರ್ಚು ಮಾಡಿ ಸಮೀಕ್ಷೆ ಮಾಡಿಸಿದರು. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ವರದಿ ಸಲ್ಲಿಸುವ ವೇಳೆಗೆ ಸಿದ್ದರಾಮಯ್ಯ ಸರಕಾರದ ಅವಧಿ ಮುಗಿದು, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿತ್ತು ಎಂದು ಭೋಸರಾಜು ತಿಳಿಸಿದರು.
ಆದರೆ, ಕಾಂತರಾಜ ಆಯೋಗವು ವರದಿ ಸಲ್ಲಿಸಲು ಮುಂದಾದಾಗ ಕುಮಾರಸ್ವಾಮಿ ವರದಿಯನ್ನು ಸ್ವೀಕರಿಸಲು ಸಿದ್ಧರಾಗಿಲ್ಲ. ಆಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿ ಪುಟ್ಟರಂಗ ಶೆಟ್ಟಿ ಇದ್ದರು. ಇಡೀ ರಾಜ್ಯದ ಜನಸಂಖ್ಯೆ, ಅವರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದು ಸರಕಾರಕ್ಕೆ ಅಗತ್ಯ ಎಂದು ಅವರು ಹೇಳಿದರು.
ಪ್ರಾದೇಶಿಕ ಅಸಮಾನತೆ ನಿವಾರಣೆ ಮಾಡಲು ನಂಜುಂಡಪ್ಪ ಸಮಿತಿ ಅಧ್ಯಯನ ಮಾಡಿ ವರದಿ ನೀಡಿತು. ಅದರಂತೆ, ಹಿಂದುಳಿದ, ಅತಿ ಹಿಂದುಳಿದ ತಾಲೂಕುಗಳನ್ನು ಪಟ್ಟಿ ಮಾಡಿಕೊಡಲಾಯಿತು. ಆ ಸಮಿತಿಯ ವರದಿಯ ಹಿನ್ನೆಲೆಯಲ್ಲಿ ವಿಶೇಷ ಅನುದಾನ ಮೀಸಲಿಟ್ಟು ಅಭಿವೃದ್ಧಿಗೆ ಖರ್ಚು ಮಾಡುತ್ತಿದ್ದೇವೆ ಎಂದು ಭೋಸರಾಜು ಹೇಳಿದರು.
ಅದೇ ರೀತಿ, ಸಮಾಜದಲ್ಲಿ ಯಾವ ಯಾವ ಸಮುದಾಯಗಳು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿವೆಯೋ ಅವುಗಳ ಅಭಿವೃದ್ಧಿಗಾಗಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈ ವರದಿ ಸಹಕಾರಿಯಾಗಲಿದೆ. ಆದುದರಿಂದಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಸಚಿವರಿಗೆ ಈ ವರದಿಯಲ್ಲಿನ ಅಂಶಗಳನ್ನು ಅಧ್ಯಯನ ಮಾಡಿ, ಚರ್ಚೆ ನಡೆಸೋಣ ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು.