ಕನ್ನಡ ಭಾಷಾ ಕಲಿಕಾ ಅಧಿನಿಯಮದ ಪ್ರಾಯೋಗಿಕ ಸಮಸ್ಯೆ; ಶಿಕ್ಷಣ ಇಲಾಖೆ ಕ್ರಮಕ್ಕೆ ಬಿಳಿಮಲೆ ಬೇಸರ

ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ಕಳೆದ ನವೆಂಬರ್ನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿ ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ರ ಸಮರ್ಪಕ ಅನುಷ್ಠಾನದಲ್ಲಿ ಹಂತ ಹಂತವಾಗಿ ಎದುರಾಗಿರುವ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದರೂ ಇಲ್ಲಿಯವರೆಗೆ ಕ್ರಮಕ್ಕೆ ಮುಂದಾಗದ ಶಾಲಾ ಶಿಕ್ಷಣ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಕನ್ನಡ ಭಾಷಾ ಕಲಿಕಾ ಅಧಿನಿಯಮವು ಕಡ್ಡಾಯ ಶಿಕ್ಷಣ ಕಾಯ್ದೆಯ ಸ್ವರೂಪದ ಅಡಿಯಲ್ಲಿ ನಿರೂಪಿತವಾಗಿದ್ದು, ಖಾಸಗಿ ಶಾಲೆಗಳ ಕನ್ನಡ ಬೋಧನೆಯ ಕುರಿತಾದ ಅನ್ಯ ಮನಸ್ಥತೆಯನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಕೇಂದ್ರ ಪಠ್ಯಕ್ರಮ ಸೇರಿದಂತೆ ಇತರ ಪಠ್ಯಕ್ರಮಗಳ ಶಾಲೆಗಳಲ್ಲಿ ಕನ್ನಡೇತರ ಮಕ್ಕಳಿಗೂ ಕನ್ನಡವನ್ನು ಕಲಿಸುವುದನ್ನು ಈ ಕಾಯ್ದೆಯು ಕಡ್ಡಾಯ ಮಾಡಲಾಗಿದೆ. ಇದರ ಅನುಷ್ಠಾನಕ್ಕೆ ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂಬ ಸ್ಪಷ್ಟ ನಿರ್ದೇಶನವನ್ನು ನೀಡಿದ್ದರೂ, ಇಲಾಖಾಧಿಕಾರಿಗಳ ಸ್ಪಂದನೆ ಆಶಾದಾಯಕವಾಗಿಲ್ಲ ಎಂದು ತಿಳಿಸಿದ್ದಾರೆ.
ಕಾಯ್ದೆಯನ್ನು ಉಲ್ಲಂಘಿಸಿದ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಬೇಕು. 9 ಮತ್ತು 10ನೇ ತರಗತಿ ಮಕ್ಕಳಿಗೆ ರಾಜ್ಯ ಸರಕಾರದ ಕನ್ನಡ ಪ್ರಥಮ ಅಥವಾ ದ್ವಿತೀಯ ಭಾಷೆ ಪಠ್ಯ ಪುಸ್ತಕವನ್ನು ಶಾಲೆಗಳು ಬೋಧಿಸುವ ಜವಾಬ್ದಾರಿಯನ್ನು ಹೊಂದಿದ್ದು, ಕೇಂದ್ರೀಯ ಮಂಡಳಿ ಪರೀಕ್ಷೆಗಳು ನಡೆಯುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ನಿಗದಿಪಡಿಸಿ ಪಠ್ಯಕ್ರಮವನ್ನು ಅನುಸರಿಸಿ ಪರೀಕ್ಷೆಯನ್ನು ನಿರ್ವಹಿಸುವುದು ಸಂಬಂಧಪಟ್ಟ ಮಂಡಳಿಗಳ ನೀತಿ ನಿರೂಪಣಾ ತೀರ್ಮಾನಗಳಾಗಿರುವ ಕಾರಣ ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆ ಸಂಬಂಧಪಟ್ಟ ಮಂಡಳಿಗಳೊಂದಿಗೆ ಈಗೀನಿಂದಲೇ ಸಮನ್ವಯ ಸಾಧಿಸಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಮೂರು ತಿಂಗಳ ಹಿಂದೆಯೇ ಸೂಚಿಸಿದ್ದು, ಇಲಾಖೆಯ ವರದಿಯ ನಿರೀಕ್ಷೆಯಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.
ಈ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಗ್ರಹದ ಮೇರೆಗೆ 2022ರಲ್ಲಿ ಶಾಲಾ ಮತ್ತು ಸಾಕ್ಷರತಾ ಇಲಾಖೆಯು ಹೊರಡಿಸಿರುವ ಸರಕಾರದ ಆದೇಶಾನುಸಾರ ಶಿಕ್ಷಣ ಸಚಿವರ ಅಧ್ಯಕ್ಷತೆಯ ರಾಜ್ಯಮಟ್ಟದ ಸಮಿತಿಯ ಸಭೆಯನ್ನು ಕೂಡಲೇ ಆಯೋಜಿಸಲು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.