ಬಿಟ್ ಕಾಯಿನ್ ಹಗರಣ ಪ್ರಕರಣ | ಹಿರಿಯ ಐಪಿಎಸ್ ಅಧಿಕಾರಿಗೆ ಎರಡನೇ ಬಾರಿ ನೋಟಿಸ್!
ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‍ಐಟಿ) ಅಧಿಕಾರಿಗಳು ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರಿಗೆ ಎರಡನೇ ಬಾರಿ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವುದಾಗಿ ವರದಿಯಾಗಿದೆ.
ಪ್ರಕರಣದ ಈ ಹಿಂದಿನ ತನಿಖಾಧಿಕಾರಿಯಾಗಿರುವ ಸಂದೀಪ್ ಪಾಟೀಲ್ ಅವರಿಗೆ ಎರಡನೇ ಬಾರಿ ನೋಟಿಸ್ ನೀಡಲಾಗಿದ್ದು, ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ನೋಟಿಸ್‍ನಲ್ಲಿ ತಿಳಿಸಲಾಗಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.
ತನಿಖೆಯ ಭಾಗವಾಗಿ ಈ ಹಿಂದೆಯೂ ವಿಚಾರಣೆಗೆ ಹಾಜರಾಗುವಂತೆ ಸಂದೀಪ್ ಪಾಟೀಲ್ ಅವರಿಗೆ ನೋಟಿಸ್ ನೀಡಲಾಗಿತ್ತು. ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಎಸ್‍ಐಟಿ ಮುಖ್ಯಸ್ಥರಾಗಿರುವ ಮನೀಶ್ ಕರ್ಬಿಕರ್ ನೇತೃತ್ವದಲ್ಲಿ ನಡೆದ ವಿಚಾರಣೆಗೆ ಹಾಜರಾಗಿದ್ದ ಸಂದೀಪ್ ಪಾಟೀಲ್ ‘ತಮ್ಮ ಅವಧಿಯಲ್ಲಿ ಬಿಟ್‍ಕಾಯಿನ್ ಪ್ರಕರಣದ ತನಿಖೆಯಲ್ಲಿ ಲೋಪದೋಷಗಳು, ತಾಂತ್ರಿಕ ತೊಂದರೆಗಳಾಗಿಲ್ಲ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶ್ರೀಕೃಷ್ಣ ಯಾನೆ ಶ್ರೀಕಿಯ ಹೇಳಿಕೆ ಆಧರಿಸಿ ಬಿಟ್‍ಕಾಯಿನ್‍ಗಳನ್ನು ವಶಕ್ಕೆ ಪಡೆದುಕೊಂಡು, ಸರಕಾರದ ಸುಪರ್ದಿಗೆ ಅಂದೇ ನೀಡಲಾಗಿದೆ. ಆದರೆ ಪ್ರಸ್ತುತ ಎಸ್‍ಐಟಿಯಿಂದ ಬಂಧಿತರಾದ ಪ್ರಶಾಂತ್ ಬಾಬು, ಸಂತೋಷ್ ಎಸಗಿರುವ ಕರ್ತವ್ಯಲೋಪದ ಬಗ್ಗೆ ತಮಗೆ ಮಾಹಿತಿ ಇರಲಿಲ್ಲವೆಂದು' ತನಿಖಾಧಿಕಾರಿಗಳಿಗೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ: 2020ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಸುಜಯ್ ಎಂಬಾತನನ್ನು ಕೆಂಪೇಗೌಡ ನಗರಪೊಲೀಸರು ಬಂಧಿಸಿದ್ದರು. ತನಿಖೆಯಲ್ಲಿ ಈತ ಡಾರ್ಕ್‍ನೆಟ್‍ನಲ್ಲಿ ಬಿಟ್‍ಕಾಯಿನ್ ಮೂಲಕ ಡ್ರಗ್ಸ್ ಖರೀದಿಸಿರುವುದು ಗೊತ್ತಾಗಿತ್ತು. ಪ್ರಕರಣದ ಮೂಲ ಪತ್ತೆ ಹಚ್ಚಲು ಹೋದಾಗ ಬಿಟ್ ಕಾಯಿನ್ ಹಗರಣದ ಸೂತ್ರಧಾರ ಶ್ರೀಕಿಯನ್ನು ಬಂಧಿಸಲಾಗಿತ್ತು. ಬಳಿಕ ಪ್ರಕರಣದ ಮತ್ತಷ್ಟು ತನಿಖೆಗೆ ಸಿಸಿಬಿಗೆ ವಹಿಸಲಾಗಿತ್ತು.
ಡಿಜಿಪಿ ದರ್ಜೆಯ ಅಧಿಕಾರಿಯ ಮಗನ ವಿಚಾರಣೆ: ಬಿಟ್ ಕಾಯಿನ್ ಹಗರಣ ಸಂಬಂಧ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮಂಗಳವಾರ ಡಿಜಿಪಿ ದರ್ಜೆಯ ಅಧಿಕಾರಿಯ ಮಗ ರಿಷಬ್ ಎಂಬುವವರ ವಿಚಾರಣೆ ನಡೆಸಿದ್ದು, 2016ರಿಂದ 2017ರ ಅವಧಿಯಲ್ಲಿ ಆರೋಪಿ ಶ್ರೀಕಿ ಜೊತೆ ರಿಷಬ್ ನಡೆದಿದ್ದ ವ್ಯವಹಾರದ ಬಗ್ಗೆ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.