ಬಿಟ್ ಕಾಯಿನ್ ಹಗರಣ: ಇನ್ಸ್ಪೆಕ್ಟರ್ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಬಿಟ್ ಕಾಯಿನ್ ಹಗರಣದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ(ಎಸ್ಐಟಿ) ಮತ್ತೊಬ್ಬ ಇನ್ಸ್ಪೆಕ್ಟರ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಕಡೂರು ಪೊಲೀಸ್ ತರಬೇತಿ ಶಾಲೆಯ ಇನ್ಸ್ಪೆಕ್ಟರ್ ಲಕ್ಷ್ಮಿ ಕಾಂತಯ್ಯ ಎಂಬುವರನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಬಿಟ್ ಕಾಯಿನ್ ಹಗರಣ ನಡೆದಾಗ ಆರೋಪಿ ಲಕ್ಷ್ಮೀಕಾಂತಯ್ಯ ಸಿಸಿಬಿ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಗರಣದ ತನಿಖೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅದರಂತೆ ಫೆ.28ರ ಬುಧವಾರ ವಿಚಾರಣೆಗೆ ಹಾಜರಾಗಿದ್ದ ಲಕ್ಷ್ಮೀಕಾಂತಯ್ಯ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿರುವುದಾಗಿ ಗೊತ್ತಾಗಿದೆ.
ಬಳಿಕ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ವಶಕ್ಕೆ ನೀಡುವಂತೆ ಎಸ್ಐಟಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕೆಲದಿನಗಳ ಹಿಂದೆ ಇದೇ ಬಿಟ್ ಕಾಯಿನ್ ಹಗರಣ ಸಂಬಂಧ ಇನ್ಸ್ಪೆಕ್ಟರ್ ಪ್ರಶಾಂತ್ಬಾಬು ಮತ್ತು ಸೈಬರ್ ತಜ್ಞ ಸಂತೋಷ್ ನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ಆರೋಪಿ ಲಕ್ಷ್ಮೀಕಾಂತಯ್ಯನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂಬುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.
ಬಿಟ್ ಕಾಯಿನ್ ಮತ್ತು ಡ್ರಗ್ಸ್ ಪ್ರಕರಣದಲ್ಲಿ ಅಂದು ಸಿಸಿಬಿ ತನಿಖಾಧಿಕಾರಿಗಳಾಗಿದ್ದ ಇನ್ಸ್ಪೆಕ್ಟರ್ ಗಳಾದ ಪ್ರಶಾಂತ್ ಬಾಬು, ಲಕ್ಷ್ಮಿ ಕಾಂತಯ್ಯ, ಚಂದ್ರಾಧರ ಹಾಗೂ ಶ್ರೀಧರ್ ಕೆ.ಪೂಜಾರ್ ಹಾಗೂ ಎಚ್ಎಸ್ಆರ್ ಲೇಔಟ್ನ ಜಿಸಿಐಡಿ ಟೆಕ್ನಾಲಜಿಸ್ ಪ್ರೈವೆಟ್ ಲಿಮಿಟೆಡ್ನ ಸಿಇಓ ಎಸ್.ಸಂತೋಷ್ ಕುಮಾರ್ ವಿರುದ್ಧ ಸಾಕ್ಷ್ಯಾಧಾರಗಳ ನಾಶ ಆರೋಪದಡಿ ಎಸ್ಐಟಿ ಎಫ್ಐಆರ್ ದಾಖಲಿಸಿತ್ತು.