ಮಹಿಳೆಯರನ್ನು ಕೀಳಾಗಿ ಬಿಂಬಿಸುವ ಬಿಜೆಪಿ ಜಾಹೀರಾತಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡನೆ
Photo: x/@BJP4India)
ಬೆಂಗಳೂರು : ಇತ್ತೀಚಿಗೆ ಬಿಜೆಪಿ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಮಹಿಳೆಯರನ್ನು ಕೀಳಾಗಿ ಬಿಂಬಿಸಲಾಗಿದ್ದು, ಕೂಡಲೇ ಆ ಜಾಹಿರಾತು ಹಿಂಪಡೆದು, ಕ್ಷಮೆಯಾಚಿಸಬೇಕು ಎಂದು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.
ಸೋಮವಾರ ಈ ಕುರಿತು ಪ್ರಕಟನೆ ನೀಡಿರುವ ಸಂಘಟನೆಯ ಅಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ, ವಧುವಿನ ಅಲಂಕಾರ ಮಾಡಿದ ಮಹಿಳೆಯೊಬ್ಬಳಿಗಾಗಿ ‘ಇಂಡಿಯಾ’ ಕೂಟದ ಪಕ್ಷದ ಪುರುಷರು ಕಿತ್ತಾಡುತ್ತಿರುವಂತೆ ವಿಡೀಯೊ ಮಾಡಲಾಗಿದ್ದು, ಕೊನೆಯಲ್ಲಿ ಮೋದಿಯನ್ನು ತೋರಿಸಲಾಗುತ್ತದೆ. ಈ ವಿಡೀಯೊ ನೋಡಿದರೆ ಬಿಜೆಪಿಯ ಹೀನ ಮನಸ್ಥಿತಿ ಅರ್ಥವಾಗುತ್ತದೆ ಎಂದು ಟೀಕಿಸಿದ್ದಾರೆ.
ಮನುವಾದಿ ಮೌಲ್ಯವನ್ನು ತಲೆಗೇರಿಸಿಕೊಂಡಿರುವ ಬಿಜೆಪಿ ಮಹಿಳೆ ಕೇವಲ ಭೋಗದ ವಸ್ತು ಎಂದು ಬಿಂಬಿಸಿ, ತನ್ನ ಮಹಿಳಾ ವಿರೋಧಿ ನೀತಿಯನ್ನು ಜಾಹೀರಾತಿನ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದೆ. ಇದು ಕೇವಲ ಮಹಿಳೆಯರಿಗೆ ಮಾತ್ರವಲ್ಲ. ಘನತೆಯ ಹಕ್ಕು ನೀಡಿರುವ ಸಂವಿಧಾನಕ್ಕೆ ಬಗೆದಿರುವ ಅಪಚಾರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಸ್ವಾಭಿಮಾನವಿರುವ ಯಾವ ಮಹಿಳೆಯೂ ಒಪ್ಪಲು ಸಾಧ್ಯವಿಲ್ಲ. ಯಾವುದೇ ಪಕ್ಷವಿರಲಿ, ವ್ಯಕ್ತಿಯೇ ಇರಲಿ, ಮಹಿಳೆಯರ ಘನತೆಗೆ ಧಕ್ಕೆ ತರುವುದು ಖಂಡನೀಯ. ಈ ರೀತಿಯ ಜಾಹಿರಾತುಗಳನ್ನು ನೀಡದಂತೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಬೇಕು ಎಂದು ಮೀನಾಕ್ಷಿ ಬಾಳಿ ಆಗ್ರಹಿಸಿದ್ದಾರೆ.