“ ಸಚಿವ ಝಮೀರ್ ಅಹ್ಮದ್ ಹೇಳಿಕೆ ತಿರುಚಿ ಗೊಂದಲ ಮೂಡಿಸುತ್ತಿರುವ ಬಿಜೆಪಿ”
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಮೆಹ್ರೋಜ್ ಖಾನ್ ಹೇಳಿಕೆ
ಬೆಂಗಳೂರು: ಮುಸ್ಲಿಂ ಸಮುದಾಯವನ್ನು ಗುರಿ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ನಾಯಕರು ಈ ಬಾರಿ ಸಚಿವರಾದ ಝಮೀರ್ ಅಹ್ಮದ್ ಅವರ ಹೇಳಿಕೆಯನ್ನು ತಿರುಚಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಮೆಹ್ರೋಜ್ ಖಾನ್ ಹೇಳಿದ್ದಾರೆ.
ಈ ಸಂಬಂಧ ಪ್ರಕಟನೆಯಲ್ಲಿ ಹೇಳಿಕೆ ನೀಡಿರುವ ಅವರು, ಕರ್ನಾಟಕದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಗೆದ್ದು ಸುಭದ್ರ ಆಡಳಿತದೊಂದಿಗೆ 6 ತಿಂಗಳು ಪೂರೈಸಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನ ಮಂಡಲದ ಅತ್ಯುನ್ನತ ಸ್ಪೀಕರ್ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಿ ಗೌರವಿಸಿದೆ ಎಂದಿದ್ದಾರೆ.
ಸ್ಪೀಕರ್ ಸ್ಥಾನ ಎಂದರೆ ಅದು ಪ್ರತಿಯೊಬ್ಬ ಜನಪ್ರತಿನಿಧಿ ಗೌರವ ನೀಡುವ ಹುದ್ದೆ. ಅದನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡುವ ಬದ್ಧತೆ ಹಾಗೂ ಇಚ್ಛಾಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ. ಝಮೀರ್ ಅಹ್ಮದ್ ಏಳಿಗೆ ಸಹಿಸದ ಬಿಜೆಪಿ ನಾಯಕರು ಅವರನ್ನು ಗುರಿಯಾಗಿಸಿ ಮಾತನಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಚಳಿಗಾಲದ ಅಧಿವೇಶನದಲ್ಲಿ ಬರಗಾಲ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಆಡಳಿತ ಪಕ್ಷ ಸಿದ್ಧವಿದ್ದರೂ ವಿರೋಧ ಪಕ್ಷ ಕ್ಷುಲ್ಲಕ ಕಾರಣಕ್ಕೆ ಗದ್ದಲ ಎಬ್ಬಿಸುತ್ತಿರುವುದು ನಿಜಕ್ಕೂ ಶೋಚನೀಯ. ಇದು ಬಿಜೆಪಿ ನಾಯಕರಿಗೆ ಜನರ ಸಮಸ್ಯೆಗಿಂತ ಮುಸಲ್ಮಾನ ಸಮುದಾಯದ ಮೇಲಿನ ದ್ವೇಷವೇ ಹೆಚ್ಚಾಗಿದೆ. ಇದನ್ನೆಲ್ಲ ನೋಡುತ್ತಿರುವ ರಾಜ್ಯದ ಜನರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.