ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜಿನಾಮೆಗೆ ಬಿಜೆಪಿ ಆಗ್ರಹ
ಬೆಂಗಳೂರು: ‘ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸೂಕ್ಷ್ಮತೆ, ಹಿರಿತನ ಇದ್ದರೆ ಅವರು ಕೂಡಲೇ ತಮ್ಮ ಹುದ್ದೆಗೆ ರಾಜಿನಾಮೆ ಕೊಡಬೇಕು’ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ.
ಗುರುವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಗೃಹ ಇಲಾಖೆಯಲ್ಲಿ ಗರಿಷ್ಠ ಹಸ್ತಕ್ಷೇಪ ಇದೆ. ಸಚಿವರೂ ಸಂಪೂರ್ಣ ಅಸಹಾಯಕರಾಗಿದ್ದಾರೆ. ಯಾವ ಪೊಲೀಸ್ ಅಧಿಕಾರಿಗಳೂ ಬಿಗಿಯಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗದಂಥ ವ್ಯವಸ್ಥೆ ಇಲ್ಲಿದೆ ಎಂದು ದೂರಿದರು.
ಈ ಜಡತ್ವವನ್ನು ಹೋಗಲಾಡಿಸಿ ಸರಿಪಡಿಸಲು ಸರಕಾರ ಮುಂದಾಗಬೇಕಿದೆ. ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಕೊಡಬೇಕು. ಕಾನೂನು ಕ್ರಮವನ್ನು ಬಿಗಿಗೊಳಿಸಬೇಕು. ಗೃಹ ಸಚಿವರು ರಾಜೀನಾಮೆ ನೀಡಬೇಕು. ಸಿಎಂ, ಗೃಹ ಸಚಿವರ ರಾಜೀನಾಮೆ ಪಡೆದುಕೊಳ್ಳಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಒಂದು ವರ್ಷದ ಅವಧಿಯಲ್ಲಿ ಇಡೀ ಕರ್ನಾಟಕದಲ್ಲಿ ಕೊಲೆ, ಸುಲಿಗೆ, ಮತಾಂಧ ಶಕ್ತಿಗಳ ವಿಜೃಂಭಣೆ, ತುಷ್ಟೀಕರಣದ ರಾಜಕಾರಣ ಸೇರಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು.
ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ. ನೇಹಾ ಕೊಲೆ ಬಳಿಕ ಅಂಜಲಿ ಹತ್ಯೆ ನಡೆದಿದೆ. ಇವತ್ತು ಬೆಳಿಗ್ಗೆ ಸುಬ್ರಹ್ಮಣ್ಯಪುರದಲ್ಲಿ ಇನ್ನೊಂದು ಕೊಲೆ ನಡೆದಿದೆ. ಅಂಜಲಿ ಮನೆಯವರು ಈ ಯುವತಿಗೆ ಬೆದರಿಕೆ ಕುರಿತು ಠಾಣೆಗೆ ತಿಳಿಸಿದ್ದರೂ ಸಹ ಕ್ರಮ ವಹಿಸಲು ವಿಫಲವಾಗಿದ್ದಾರೆ. ಭಂಡ ಸರಕಾರ ಎಲ್ಲ ಸೂಕ್ಷ್ಮತೆಯನ್ನು ಕಳಕೊಂಡಿದೆ ಎಂದು ತಿಳಿಸಿದರು.
ವಜಾ ಮಾಡಿ: ಈ ಮಧ್ಯೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ‘ಸಿಎಂ ತಕ್ಷಣವೇ ರಾಜ್ಯದ ಗೃಹ ಸಚಿವರನ್ನು ವಜಾ ಮಾಡಬೇಕು. ಈ ಸರಕಾರಕ್ಕೆ ಜೀವ ಇದೆಯೇ? ಸರಕಾರ ಸತ್ತು ಹೋಗಿದೆಯೇ? ಮಹಿಳೆಯರು, ದಲಿತರು, ಹಿಂದುಳಿದವರನ್ನು ರಕ್ಷಿಸುವಲ್ಲಿ, ಅಮಾಯಕರನ್ನು ರಕ್ಷಿಸುವಲ್ಲಿ ಈ ಸರಕಾರ ವಿಫಲವಾಗಿದೆ. ನಾನು ಗೃಹ ಸಚಿವ ಡಾ.ಪರಮೇಶ್ವರ್ ರಾಜೀನಾಮೆ ಕೇಳುವುದಿಲ್ಲ’ ಎಂದು ತಿಳಿಸಿದರು.