ಬಿಜೆಪಿ ಬೌದ್ಧಿಕ ದಿವಾಳಿಯಾಗಿದೆ: ಸಚಿವ ಝಮೀರ್ ಅಹ್ಮದ್ ಆಕ್ರೋಶ
ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು: ಗುಂಪುಗಾರಿಕೆ ಹಾಗೂ ಆಂತರಿಕ ಕಚ್ಚಾಟದಿಂದ ಕಂಗೆಟ್ಟು ಬೌದ್ಧಿಕವಾಗಿ ದಿವಾಳಿಯಾಗಿರುವ ಬಿಜೆಪಿಯು ರಾಜ್ಯದ ಜನಪರ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಎಂದೂ ಜನರಿಂದ ಬಹುಮತ ಪಡೆಯದ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದು ಹತ್ತಾರು ಹಗರಣ ಮಾಡಿ '40 ಪರ್ಸೆಂಟ್ ಸರ್ಕಾರ' ಎಂಬ ಕುಖ್ಯಾತಿ ಪಡೆದು ಜನರಿಂದ ತಿರಸ್ಕೃತವಾಗಿದೆ. ಪ್ರತಿಪಕ್ಷ ಸ್ಥಾನದ ಜವಾಬ್ದಾರಿಯನ್ನೂ ಸರಿಯಾಗಿ ನಿಭಾಯಿಸದೆ ವಿಫಲಗೊಂಡು ಇದೀಗ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಎಂಬ ಹೊಸ ನಾಟಕ ಆರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಹಾಗೂ ಜನಪರ ತೀರ್ಮಾನಗಳನ್ನು
ಬಿಜೆಪಿಗೆ ಸಹಿಸಲು ಆಗುತ್ತಿಲ್ಲ, ಹೀಗಾಗಿ ಅನಗತ್ಯ ವಿಷಯ ಮುಂದಿಡುತ್ತಿದೆ. ಮೊದಲಿಗೆ ಮುಡಾ, ನಂತರ ವಕ್ಫ್ ವಿಚಾರ. ಇದೀಗ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಹೋರಾಟ ಎಂದು ಹೇಳಿದೆ. ರಾಜಕೀಯವಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಎದುರಿಸಲು ಸಾಧ್ಯವಾಗದೆ ಅವರಿಗೆ ಸಂಬಂಧವೇ ಇಲ್ಲದ ಅವರ ಪಾತ್ರವೇ ಇರದ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ಕೇಳುತ್ತಿರುವುದು ಬಿಜೆಪಿಯವರ ಎಳಸುತನಕ್ಕೆ ಸಾಕ್ಷಿ ಎಂದು ಝಮೀರ್ ಅಹ್ಮದ್ ಖಾನ್ ಲೇವಡಿ ಮಾಡಿದ್ದಾರೆ.
ವಕ್ಫ್ ವಿಚಾರದಲ್ಲಿ ಅಧಿವೇಶನ ದಲ್ಲಿ ಎರಡೂ ಸದನಗಳಲ್ಲಿ ಸಮರ್ಪಕ ಉತ್ತರ ನೀಡಲಾಗಿದೆ. ಆಗ ಗಪ್ ಚುಪ್ ಆಗಿ ಯಾರೂ ಏನೂ ಮಾತನಾಡಲಿಲ್ಲ. ವಿಧಾನ ಸಭೆಯಲ್ಲಿ ಉತ್ತರ ನೀಡುವಾಗ ಬಸನಗೌಡ ಪಾಟೀಲ್ ಯತ್ನಾಳ್ ತಪ್ಪಿಸಿಕೊಂಡು ಹೋದರು. ಅಂದು ನಾಪತ್ತೆ ಆಗಿದ್ದವರು ಈಗ ಮತ್ತೆ ಕಂಪ್ಲಿ ಯಿಂದ ಹೋರಾಟ ಎಂದು ಹೊರಟಿದ್ದಾರೆ. ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಅವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ. ಬಿಜೆಪಿಯವರು ಎಷ್ಟೇ ಬಟ್ಟೆ ಹರಿದುಕೊಂಡು ಅರಚಿದರೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಝಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.