ಬಿಜೆಪಿ-ಜೆಡಿಎಸ್ ಪಾದಯಾತ್ರೆಯನ್ನು ಹಿಂಪಡೆಯದಿದ್ದರೆ ಹೋರಾಟ : ಕುರುಬರ ಸಂಘ ಎಚ್ಚರಿಕೆ
ಬೆಂಗಳೂರು: ಸಿದ್ದರಾಮಯ್ಯ ಅವರು 40 ವರ್ಷಗಳ ಅವರ ಸುದೀರ್ಘ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕಿಯಿಲ್ಲದ ಆಡಳಿತವನ್ನು ನಡೆಸಿದ್ದು, ಈಗ ಅವರ ವಿರುದ್ಧ ಷಡ್ಯಂತ್ರ ರೂಪಿಸಿವೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆಯನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಎಚ್ಚರಿಕೆ ನೀಡಿದೆ.
ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಈರಣ್ಣ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು ಎಂದು ಬಿಜೆಪಿ-ಜೆಡಿಎಸ್ ಕುತಂತ್ರ ಮಾಡಿವೆ. ಯಾವುದೇ ಕಪ್ಪುಚುಕ್ಕಿ ಇಲ್ಲದೆ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರಿಗೆ ಮಸಿ ಬಳಿಯಲು ವಿಜಯೇಂದ್ರ ಮತ್ತು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಇದು ಸಫಲವಾಗುವುದಿಲ್ಲ ಎಂದರು.
ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯನವರು ಬಡವರು, ಮಹಿಳೆಯರು, ರೈತರ, ಕಾರ್ಮಿಕರ ಪರ ಇದ್ದಾರೆ. ಹಿಂದುಳಿದ ವರ್ಗಗಳು, ದಲಿತ ಸಮುದಾಯಗಳು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರದ ಪರ ಬಂಡೆಯಂತೆ ನಿಂತಿವೆ ಎಂದು ಅವರು ಹೇಳಿದರು.
ಅಭಿವೃದ್ಧಿಗಾಗಿ ಹೋರಾಟ ಮಾಡಿದರೆ ಅದನ್ನು ಒಪ್ಪಿಕೊಳ್ಳಬಹುದು, ಆದರೆ ಇಲ್ಲಿ ಸಿದ್ದರಾಮಯ್ಯ ಅವರ ತೇಜೋವಧೆಗಾಗಿ ಪಾದಯಾತ್ರೆ ನಡೆಸುತ್ತಿರುವುದು ಸರಿಯಲ್ಲ. ರಾಜ್ಯದ ಪ್ರತಿ ಗ್ರಾಮದಲ್ಲಿಯೂ ಹಿಂದುಳಿದ ವರ್ಗದ ಜನರಿದ್ದು ಹೋರಾಟ ನಡೆಸಲು ಸಿದ್ದರಾಗಿದ್ದೇವೆ ಎಂದು ಎಂ.ಈರಣ್ಣ ಹೇಳಿದರು.
ಸಂಘದ ಮಾಜಿ ಉಪಾಧ್ಯಕ್ಷ ಜಗದೀಶ್ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಕಳಂಕ ತರುವ ಕಾರ್ಯವನ್ನು ಎರಡೂ ಪಕ್ಷಗಳು ಮಾಡುತ್ತಿವೆ. ಸಮುದಾಯವಾಗಿ ನಾವು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತೇವೆ. ಹಗರಣದ ಬಗ್ಗೆ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿ ಪಾರದರ್ಶಕತೆ ಮೆರೆದಿದ್ದಾರೆ ಎಂದರು.
ಬಿಜೆಪಿ-ಜೆಡಿಎಸ್ ತಮ್ಮ ಪಾದಯಾತ್ರೆ ಯೋಜನೆಯನ್ನು ಕೈ ಬಿಡಬೇಕು. ಇದು ದುರುದ್ದೇಶ ಪೂರಿತ, ರಾಜಕೀಯ ಪ್ರೇರಿತ ಯಾತ್ರೆ. ಈ ಯಾತ್ರೆಯನ್ನು ಕೈ ಬಿಡದಿದ್ದರೆ ನಾವು ರಾಜ್ಯಾದ್ಯಂತ ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಬಸವರಾಜ ಬಸಲಿಗುಂದಿ, ಖಜಾಂಚಿ ಕೆ.ಎಂ. ಕೃಷ್ಣಮೂರ್ತಿ, ಮಾಜಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ ಸೇರಿ ಹಲವರು ಉಪಸ್ಥಿತರಿದ್ದರು.