‘ಭಾರತದ ನಕಾಶೆ ತಿರುಚಿರುವುದು ದೇಶದ್ರೋಹ’ : ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ವಾಗ್ದಾಳಿ
PC : x/@BJP4India
ಬೆಂಗಳೂರು : ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಪ್ರಯುಕ್ತ ‘ಗಾಂಧಿ ಭಾರತ’ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ಹಾಕಿಸಿರುವ ಬ್ಯಾನರ್ಗಳಲ್ಲಿ ಭಾರತದ ನಕ್ಷೆ ಇದ್ದು, ಅದರಲ್ಲಿ ಕಾಶ್ಮೀರ ಭೂಭಾಗವನ್ನೇ ಕೈಬಿಡುವ ಮೂಲಕ ದೇಶದ್ರೋಹ ಕೃತ್ಯ ಎಸಗಲಾಗಿದೆ. ಈ ಕಾರ್ಯಕ್ರಮದ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದಕ್ಕೆ ನೇರಹೊಣೆಗಾರರು ಎಂದು ಬಿಜೆಪಿ ಹಾಗೂ ಜೆಡಿಎಸ್ ವಾಗ್ದಾಳಿ ನಡೆಸಿವೆ.
ಗುರುವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಪಾಕ್ ಆಕ್ರಮಿತ ಕಾಶ್ಮೀರವನ್ನು ಕಾಂಗ್ರೆಸ್ ಸರಕಾರ ಪಾಕಿಸ್ತಾನಕ್ಕೆ ಧಾರೆ ಎರೆದು ಕೊಟ್ಟಿದೆ. ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದೇಶದ್ರೋಹ. ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಎಂತಹಾ ಹೀನ ಕೆಲಸಕ್ಕಾದರೂ ಸಿದ್ದ ಎಂಬುದಕ್ಕೆ ಬೆಳಗಾವಿಯಲ್ಲಿ ಹಾಕಿಸಿರುವ ಬ್ಯಾನರ್ಗಳೇ ಸಾಕ್ಷಿ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬ್ಯಾನರ್ಗಳನ್ನು ತೆರವುಗೊಳಿಸಿ, ಭಾರತದ ನಕಾಶೆಯನ್ನು ತಿರುಚಿದ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಈ ಬಗ್ಗೆ ಜೆಡಿಎಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಬೆಳಗಾವಿಯಲ್ಲಿ ‘ಗಾಂಧಿ ಭಾರತ’ ಹೆಸರಿನಲ್ಲಿ ಹಾಕಿಸಿರುವ ಭಾರತದ ನಕ್ಷೆಯಲ್ಲಿ ಕಾಶ್ಮೀರ ಭೂಭಾಗವನ್ನೇ ಕೈಬಿಟ್ಟಿದೆ ಇಟಲಿ ಕಾಂಗ್ರೆಸ್. ಭಾರತದ ನಕ್ಷೆಯನ್ನು ತಿರುಚುವುದು, ಮಾರ್ಪಾಡು ಮಾಡುವುದು ದೇಶದ್ರೋಹದಂತಹ ಗಂಭೀರ ಅಪರಾಧಿ ಕೃತ್ಯ ಎಂದು ಹೇಳಿದೆ.
ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಆದರೆ, ವೋಟಿಗಾಗಿ ಓಲೈಕೆ ರಾಜಕಾರಣ ಮಾಡುತ್ತ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸುವ ಕಾಂಗ್ರೆಸ್ ದೇಶದ್ರೋಹದ ಮನಸ್ಥಿತಿ ಬ್ಯಾನರ್ಗಳಿಂದ ಜಗಜ್ಜಾಹೀರಾಗಿದೆ ಎಂದು ಜೆಡಿಎಸ್ ಟೀಕಿಸಿದೆ.
‘ಭಾರತದ ಮುಕುಟಮಣಿ, ಭಾರತದ ಹೆಮ್ಮೆ ಕಾಶ್ಮೀರದಲ್ಲಿ ಶಾಂತಿಯನ್ನು ಪಸರಿಸಿ, ಲಕ್ಷಾಂತರ ಜನ ಪ್ರವಾಸಿಗರ ಆಕರ್ಷಣೀಯ ಪ್ರದೇಶವನ್ನಾಗಿ ಪ್ರಧಾನಿ ನರೇಂದ್ರ ಮೋದಿಯವರು ಭವ್ಯ ಭಾರತ ಸೃಷ್ಟಿಸಿದ್ದಾರೆ. ಆದರೆ, ಗಾಂಧಿ ಭಾರತದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ, ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶವನ್ನು ಪಾಕಿಸ್ತಾನಕ್ಕೆ ಧಾರೆ ಎರೆದು, ಭಾರತದ ನಕಾಶೆಯನ್ನು ತಿರುಚಿರುವುದು ದೇಶದ್ರೋಹ’
-ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
‘ಅಂಬೇಡ್ಕರರನ್ನು ತುಚ್ಛವಾಗಿ ನೋಡಿದ್ದ ಕಾಂಗ್ರೆಸ್ ಪಕ್ಷವು 370ನೇ ವಿಧಿ ಮೂಲಕ ಅವತ್ತೇ ಓಲೈಕೆ ರಾಜಕಾರಣ ಮಾಡಿತ್ತು. ಆಗ ಕಾಂಗ್ರೆಸ್ಸಿನ ತಪ್ಪು ನೀತಿ, ಓಲೈಕೆ ರಾಜಕೀಯದ ವಿರುದ್ಧ ಜನಸಂಘ ಪ್ರಾರಂಭವಾಗಿತ್ತು. 370ನೇ ವಿಧಿ ತೆಗೆದಿದ್ದು ಯಾರು?, ಬಿಜೆಪಿ ಹುಟ್ಟಿದ್ದೇ ಅಂಬೇಡ್ಕರರ ಸಿದ್ಧಾಂತಗಳನ್ನು ಬೆಂಬಲಿಸುವ ಉದ್ದೇಶದಿಂದ’
-ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ನಾಯಕ