ಸುಳ್ಳಿನ ಪಲ್ಲಕ್ಕಿ ಹೊತ್ತು ಮೆರವಣಿಗೆ ಹೊರಟ ಬಿಜೆಪಿ: ಕಾಂಗ್ರೆಸ್ ಟೀಕೆ
"ಕೇಂದ್ರ ಬಿಜೆಪಿ ಸರಕಾರ, ತಮ್ಮ ದುಷ್ಟತನವನ್ನು ಮುಚ್ಚಿ, ಕರ್ನಾಟಕದ ಮೇಲೆಯೇ ಗೂಬೆ ಕೂರಿಸಲು ಹೊರಟಿದೆ"
ಬೆಂಗಳೂರು: ‘ಸುಳ್ಳೇ ಬಿಜೆಪಿಯ ಮನೆದೇವ್ರು, ಬಿಜೆಪಿಗರು ಈಗ ಸುಳ್ಳಿನ ಪಲ್ಲಕ್ಕಿಯನ್ನು ಹೊತ್ತು ಮೆರವಣಿಗೆ ಹೊರಟಿದ್ದಾರೆ, ಮೊನ್ನೆ ಅಮಿತ್ ಶಾ, ನಿನ್ನೆ ನಿರ್ಮಲ ಸೀತಾರಾಮನ್’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಬರ ಪರಿಹಾರ ಕೊಡದಿರುವ ಕೇಂದ್ರದ ಬಿಜೆಪಿ ಸರಕಾರ, ತಮ್ಮ ದುಷ್ಟತನವನ್ನು ಮುಚ್ಚಿ, ಕರ್ನಾಟಕದ ಮೇಲೆಯೇ ಗೂಬೆ ಕೂರಿಸಲು ಹೊರಟಿದ್ದಾರೆ. ಕುಣಿಯಲು ಬರದವರು ನೆಲ ಡೊಂಕು ಎನ್ನುವಂತಿದೆ ಬಿಜೆಪಿಯ ಸುಳ್ಳಿನ ಹೇಳಿಕೆಗಳು’ ಎಂದು ವಾಗ್ದಾಳಿ ನಡೆಸಿದೆ.
‘ಬರ ಪರಿಹಾರ ಒದಗಿಸುವಂತೆ ರಾಜ್ಯ ಸರಕಾರ ಸೆಪ್ಟೆಂಬರ್ ತಿಂಗಳಲ್ಲೇ ನಷ್ಟದ ವರದಿ ತಯಾರಿಸಿ, ಪ್ರಸ್ತಾವನೆ ಸಲ್ಲಿಸಿ ಮೊದಲ ಪತ್ರ ಬರೆದಿದೆ, ಸೆಪ್ಟೆಂಬರ್ ಮೊದಲ ವಾರದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಬಂದು ಹೋಗಿದೆ. ಇಷ್ಟೇ ಅಲ್ಲ, ರಾಜ್ಯದ ಸಚಿವರ ನಿಯೋಗ ಕೇಂದ್ರ ಸರಕಾರವನ್ನು ಭೇಟಿಯಾಗಿದೆ, ಅದಕ್ಕೂ ಸ್ಪಂದನೆ ಸಿಗದಿರುವಾಗ ಸ್ವತಃ ಮುಖ್ಯಮಂತ್ರಿಗಳೇ ಪ್ರಧಾನಿ ಭೇಟಿಯಾಗಿದ್ದಾರೆ’ ಎಂದು ಕಾಂಗ್ರೆಸ್ ವಿವರಿಸಿದೆ.
‘ಮೊದಲ ಪ್ರಸ್ತಾವನೆ ಸಲ್ಲಿಸಿ 6 ತಿಂಗಳು ಕಳೆದಿದೆ, ಬರ ಪರಿಹಾರ ನೀಡಲು ಕೇಂದ್ರಕ್ಕೆ ಇಷ್ಟು ಸಮಯ ಸಾಲುವುದಿಲ್ಲವೇ, ನಮ್ಮದು ಗುಡ್ ಗೌರ್ನೆನ್ಸ್ ಎಂದು ಬೆನ್ನು ತಟ್ಟಿಕೊಳ್ಳುವವರ ಯೋಗ್ಯತೆ ಇಷ್ಟೇನಾ?, ಚುನಾವಣೆ ಘೋಷಣೆಯಾಗುವ ಮೊದಲು ಕೇಂದ್ರ ಸರಕಾರ ಎಲ್ಲಿ ನಿದ್ದೆ ಮಾಡುತ್ತಿತ್ತು ನಿರ್ಮಲಾ ಸೀತಾರಾಮನ್ ಅವರೇ?. ಈಗ ಚುನಾವಣಾ ಆಯೋಗದ ಕಡೆ ಬೆರಳು ತೋರಿಸುವ ತಾವು ತಾಕತ್ತಿದ್ದರೆ ಆಯೋಗಕ್ಕೆ ಬರೆದಿರುವ ಪತ್ರವನ್ನು ಬಹಿರಂಗಪಡಿಸಿ’ ಎಂದು ಕಾಂಗ್ರೆಸ್ ಸವಾಲು ಹಾಕಿದೆ.